ವಚನ - 878     
 
ಆದಿ ಅನಾದಿ ಷಡುದೇವತೆಗಳಿಲ್ಲದಂದು, ಒಬ್ಬ ಶರಣ ಷಡಕ್ಷರವನು ಷಡುಸ್ಥಲವನು ಒಳಕೊಂಡು ಇರ್ದನಯ್ಯಾ. ಆ ಶರಣನ ನೆನಹಿನ ಲೀಲೆಯಿಂದ ಪರಶಿವನ ಮೂಲಜ್ಞಾನ ಪಂಚಶಕ್ತಿಗಳಾಗಿ ತೋರಿ ಬೆರಸಿದ್ದವಯ್ಯಾ, ಇದು ಕಾರಣ ಶರಣನ ಪರಮಶಾಂತಿ ಭಕ್ತ್ಯಂಗನೆಯಾಗಿ ತೋರಿ ಬೆರಸಿದ್ದಳಯ್ಯ. ಇದು ಕಾರಣ ಶರಣನ ಮಹಾಬೆಳಗು ಷಡುಸ್ಥಲಬ್ರಹ್ಮಿಗಳಾಗಿದ್ದಿತಯ್ಯಾ. ಇದು ಕಾರಣ ಶರಣನ ಪರಶಿವನ ಶಕ್ತಿಗಳ ಮಹಾಬೆಳಗು ಷಡುಭಕ್ತ್ಯಂಗನೆಯಾಗಿ ಷಡುಸ್ಥಲ ಭಕ್ತರ ಬೆರಸಿದ್ದವಯ್ಯಾ. ಇದು ಕಾರಣ ಶರಣನೊಳಡಗಿದ ಸುವಾಕುವಕ್ಷರ ಲಿಂಗ ಪ್ರಣಮ ಮಂತ್ರ ಚಕ್ರ ಕಮಲ ಸತ್ಕ್ರೀ ಭಸಿತ ರುದ್ರಾಕ್ಷಿ ಇಂತಿವೆಲ್ಲಾ ಇವರೊಳಗಡಗಿದ್ದವಯ್ಯಾ. ಇದು ಕಾರಣ ಶರಣನಿವರು ಸಹಿತ ಕೋಟ್ಯನುಕೋಟಿ ಕಾಲವು ಪ್ರಮಥಗಣೇಶ್ವರನೆಂಬ ನಾಮವಾಗಿರುತ್ತಿರ್ದನಯ್ಯಾ. ನಿಮ್ಮ ಶರಣ ಗುಹೇಶ್ವರಾ.