Index   ವಚನ - 73    Search  
 
ಪಾದೋದಕ ಪ್ರಸಾದವ ಕೊಂಡು ಪ್ರಪಂಚವ ಮಾಡುವ ಪರಸತಿಯರ ಸಂಗವ ಮಾಡುವ ಪಂಚಮಹಾಪಾತಕರು ನೀವು ಕೇಳಿರೊ. ಪಂಚಮಹಾಪಾತಕವ ಬಿಟ್ಟದ್ದೇ ಪಾದೋದಕ. ಅಲ್ಲದಿದ್ದಡೆ ಮುಂದೆ ನಿಮ್ಮ ಬಾಧಿಸುವುದಕ್ಕೆ ಕಾದಸೀಸ. ಪ್ರಸಾದವೆ ಮುಂದೆ ನಿಮ್ಮ ಪೊರೆವುದಕ್ಕೆ ಪರುಷ. ಪ್ರಪಂಚ ಮುಂದೆ ನಿಮ್ಮ ಪಾಕುಳಕ್ಕೆ ಹಾಕುವುದು. ಪರಸ್ತ್ರೀಯರ ಸಂಗವೆ ಮುಂದೆ ನಿಮಗೆ ಉರಿಗಿಚ್ಚು, ಇರಿವ ಸುರಗಿ. ಇಂತಿವ ಬಿಟ್ಟು ಭಕ್ತ ವಿರಕ್ತನಾಗಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ನಂಬಿದರೆ ಪರಶಿವ ನಮಗೊಲಿವ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.