Index   ವಚನ - 96    Search  
 
ಅಷ್ಟವಿಧಾರ್ಚನೆ ಷೋಡಶೋಪಚಾರವು ಮನದೊಳಗೆ ಮಾಡುವ ಲಿಂಗಾಂಗಿಯ ನೋಡಿ. ಆತನ ಸಮತೆ ಸಜ್ಜನವೆ ಸಮ್ಮಾರ್ಜನೆ, ಅಂತರಂಗದ ಶುದ್ಧವೆ ರಂಗವಾಲಿ, ಮನವ ನಿಲಿಸಿದ್ದೆ ಮಜ್ಜನ, ತನುವ ಮರ್ದಿಸಿದ್ದೆ ಗಂಧ, ಅಹಂಕಾರವಳಿದುದೆ ಅಕ್ಷತೆ, ಪೂರ್ವವಳಿದುದೆ ಪುಷ್ಪ, ಪ್ರಪಂಚನಳಿದುದೆ ಪತ್ರೆ, ದುರ್ಗುಣವಳಿದುದೆ ಧೂಪ, ಸುಗುಣವುಳಿದುದೆ ದೀಪ, ಅಷ್ಟಮದವಳಿದುದೆ ಆರೋಗಣೆ, ಅರಿಷಡುವರ್ಗವನಳಿದುದೆ ಆ ಹಸ್ತಕ್ಕೆ ಅಗ್ಘಣೆ, ವಿಷಯವಿಕಾರವನಳಿದುದೆ ಕರ್ಪುರ ವೀಳ್ಯ, ಸಪ್ತವ್ಯಸನವನಳಿದುದೆ ಆ ಸಹಭೋಜನ, ದಶವಾಯುವ ದೆಸೆಗೆಡಿಸಿದುದೆ ದಾನ -ಧರ್ಮ, ಹಸಿವು ತೃಷೆ ನಿದ್ರೆ ನೀರಡಿಕೆ ಜಾಡ್ಯ ಸ್ತ್ರೀಸಂಯೋಗ ಕಳವಳವಿಲ್ಲದಿದ್ದುದೆ ಜಪತಪ. ಪಂಚೇಂದ್ರಿಯ ಪ್ರಪಂಚು ಹೊದ್ದದಿದ್ದುದೆ ಪಂಚಮಹಾವಾದ್ಯ, ಪ್ರಕೃತಿ ಪಲ್ಲಟವಾದುದೆ ಪಾತ್ರಭೋಗ, ಗೀತ ಪ್ರಬಂಧ ಕರಣವೆ ಸಿಂಹಾಸನ ಏರುವ ಸುಖ, ವ್ಯಸನ ಚಂಚಲತೆಯನಳಿದುದೆ ಛತ್ರಚಾಮರ, ಶೀರ್ಷಶಿವಾಲ್ಯದೊಳಿಪ್ಪ ಪರಮಗುರು ಪರಂಜ್ಯೋತಿ ಪರಶಿವ ಪರಕ್ಕೆ ಪರವಾದ ಶ್ರೀ ಪಟ್ಟುಕಂಥೆಯ ಚೆನ್ನಬಸವೇಶ್ವರದೇವರ ಶ್ರೀಪಾದಾಂಗುಲಿಗೆ ಈ ವಚನವ, ಪುಣ್ಯಪುಷ್ಪವಮಾಡಿ ಅರ್ಪಿಸುವ ಕುಷ್ಟಗಿಯ ನಿರ್ವಾಣ ಕರಿಬಸವರಾಜದೇವರು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.