ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು:
ಭಕ್ತ ದಾರು? ಭವಿ ದಾರು? ಎಂದಡೆ,
ಎಲಾ, ಯಾವ ಕುಲ[ದವ]ನಾದಡೆ ಸರಿಯೋ?
ಯಾವ ದೇವರು ಆದರೆ ಸರಿಯೋ ?
ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು
ಹೇಳುವುದು ಶ್ರುತಿವಾಕ್ಯ.
ಇದರೊಳಗೆ ಏಕದೈವವನು ಪಿಡಿದು
ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ,
ಕ್ರಿಯಾಚಾರದಿಂ ನಡೆದು,
ನೀತಿಗಳನೋದಿ,
ನಿರ್ಮಳಚಿತ್ತನಾದಡೆ ಭಕ್ತ.
ಇದಂ ಮರೆದು, ಹಲವು ಕಾಲ ಲಿಂಗಧ್ಯಾನ,
ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ,
ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ
ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ,
ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು],
ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ,
ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು,
ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ]
ಲಿಂಗದೇಹಿಕನಾದಡೆಯು
ಬ್ರಾಹ್ಮಣನಾದೆಡೆಯು,
ಇವನೇ ಭವಿ.
ಇಂತಾ ಭಕ್ತ ಭವಿಗಳ ನೆಲೆಯ ತಿಳಿದು
ನಮ್ಮ ಶರಣರು ನಿರ್ಲೇಪ ದೇಹಮಂ ಅಂಗೀಕರಿಸಿ
ಪೋದರು ಕಾಣಾ
ಕೂಡಲಾದಿ ಚನ್ನಸಂಗಮದೇವಾ