Index   ವಚನ - 13    Search  
 
ಎಲಾ, ಶಿವಪೂಜೆಯ ಮಾಡುವ ಶಿವಪೂಜಕರು ನೀವು ಕೇಳಿರಯ್ಯಾ; ನಿಮ್ಮ ಶಿವಪೂಜೆ[ಯ]ವಿಧ ಯಾವುದೆಲಾ? ಜಲದಿಂದ ಮಜ್ಜನವ ನೀಡುವಿರಿ; ಜಲ ಮೀನಿನೆಂಜಲು. ಅಡವಿಯಂ ತಿರುಗಿ, ಪುಷ್ಪವಂ ತಂದು, ಶಿವಗಂ ಅರ್ಪಿ[ಸುವಿರಿ]; ಪುಷ್ಪ ಭೃಂಗದೆಂಜಲು. ಪಂಚಾಭಿಷೇಕ[ವ]ಮಾಡುವಿರಿ; ಕ್ಷೀರ ಕರುವಿನೆಂಜಲು. ಮಧು[ವ] ಅಭಿಷೇಕವ ಮಾಡುವಿರಿ; [ಮಧು] ಮಧು[ಕ]ರಮಯಂ. [ಇಂ]ತೀ ನೈವೇದ್ಯವಂ ಮಾಡುವೆಯಲ್ಲದೆ ಶಿವಪೂಜೆಯ ವಿಧವ ಬಲ್ಲೆ ಏನಯ್ಯಾ? ಅದು ಎಂತೆಂದಡೆ: ಮಾನಸ ಪೂ[ಜಕ]ಸ್ಯ ಸರ್ವಪಾಪಃ [ಪರಿಹರತಿ] | ಸಾ[ಮೀ]ಪ್ಯ[ಂ] ಸದ್ಗು[ರೋಃ] ಪ್ರಾ[ಪ್ಯ] ಪುನರ್ಭವ ವಿನಶ್ಯತಿ || ಇಂತೀ ಆಗಮ ಗ್ರಂಥವುಂಟಲ್ಲಾ ಇದನ್ನರಿತು ಮಾನಸವೆಂಬೋ ಕಲ್ಲಿನ ಮೇಲೆ ಮದಮಚ್ಚರವೆಂಬೋ ಗಂಧ ಕೊರಡಿನಿಂದ ತೇಯ್ದು, ಸತ್ಯವೆಂಬೋ ಗಂಧವಂ ಹಚ್ಚಿ, ನಿತ್ಯತ್ವ ಎಂಬೋ ಅಕ್ಷತೆಯನಿಟ್ಟು, ಗುರುಕೀಲೆಂಬೋ ಒರಳಿನಲ್ಲಿ ಮದಮಚ್ಚರವೆಂಬೋ ತಂಡಿಲಂ ಕುಟ್ಟಿ, ಬುದ್ಧಿಯೆಂಬೋ ಮೊರದಿಂದ ಝಾಡಿಸಿ ಕೇರಿ, ನಿಜವೆಂಬೋ ಅನ್ನವಂ ಮಾಡಿ, ನಿರ್ಮಳ ಚಿತ್ತವೆಂಬೋ ತುಪ್ಪವಂ ನೀಡಿ, ನಿರುಪಮ ಅವಸ್ಥೆಗಳಿಂದ ನೈವೇದ್ಯವಂ ಕೊಟ್ಟು, ಕಾಮಕ್ರೋಧವೆಂಬೋ ಬತ್ತಿಯ ಹೊಸೆದು, ಗುರುಪ್ರಣುತವೆಂಬೋ ಪಣತಿಯೊಳಗೆ ನಿರ್ಮಳವೆಂಬೋ ತೈಲವಂ ಎರೆದು ಜ್ಯೋತಿಯ ಮುಟ್ಟಿಸಿ, ನಿರ್ಮಳ ಲಿಂಗಕ್ಕಂ ಅರ್ಪಿಸಿ ಮೋಕ್ಷವ ಕಂಡಡೆ ಶಿವಪೂಜಕನೆಂದು ನಮೋ ಎಂಬುವೆನಯ್ಯಾ ಬರಿದೆ 'ನಾ ಶಿವಪೂಜೆ' 'ನೀ ಶಿವಪೂಜಕ'ನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ