Index   ವಚನ - 1    Search  
 
ಗುರುವೇ ಪರಶಿವನು. ಗುರುವೇ ಸಕಲಾಗಮಮೂರ್ತಿ. ಗುರುವೇ ಸಕಲ ವಿದ್ಯಾಸ್ವರೂಪನು. ಗುರುವೇ ಸಕಲ ಮಂತ್ರಸ್ವರೂಪನು. ಗುರುವೇ ಕಲ್ಪವೃಕ್ಷವು, ಕಾಮಧೇನುವು. ಗುರುವೇ ಪರುಷದ ಖಣಿ, ತವನಿಧಿ. ಗುರುವೇ ಕರುಣರಸಾಬ್ಧಿ. ಗುರುವಿನಿಂದಧಿಕ ದೈವವಿಲ್ಲ. ಸರ್ವಧ್ಯಾನಕ್ಕೆ ಗುರುಧ್ಯಾನವೇ ಅಧಿಕ. ಸರ್ವಪೂಜೆಗೆ ಗುರುವಿನ ಪಾದಪೂಜೆಯೇ ಅಧಿಕ. ಸರ್ವಮಂತ್ರಕ್ಕೆ ಗುರುವಿನ ವಾಕ್ಯವೇ ಅಧಿಕ. ಸರ್ವಮುಕ್ತಿಗೆ ಗುರುವಿನ ಕರುಣಕೃಪೆಯೇ ಅಧಿಕ. ಸಾಕ್ಷಿ : ''ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಂ | ಮಂತ್ರಮೂಲಂ ಗುರೋರ್ವಾಕ್ಯಂ ಮುಕ್ತಿಮೂಲಂ ಗುರೋಃ ಕೃಪಾ ||'' ಎಂಬುದಾಗಿ, ಇಂತಿವನೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಇಷ್ಟಲಿಂಗಸ್ವರೂಪವಾಗಿ ಮತ್ತೆ ಮನಸ್ಥಲಕ್ಕೆ ಪ್ರಾಣಲಿಂಗಸ್ವರೂಪವಾಗಿ ಮತ್ತೆ ಭಾವಸ್ಥಲಕ್ಕೆ ಭಾವಲಿಂಗಸ್ವರೂಪವಾಗಿ ಈ ತ್ರಿವಿಧಮೂರ್ತಿಯೇ ಅಷ್ಟಾವರಣಸ್ವರೂಪವಾಗಿ ಎನ್ನ ಅಱುಹಿನಲ್ಲಿ ಗುರು ಎನ್ನ ಪ್ರಾಣದಲ್ಲಿ ಲಿಂಗ ಎನ್ನ ಜ್ಞಾನದಲ್ಲಿ ಜಂಗಮ ಎನ್ನ ಜಿಹ್ವೆಯಲ್ಲಿ ಪಾದೋದಕ ಎನ್ನ ನಾಸಿಕದಲ್ಲಿ ಪ್ರಸಾದ ಎನ್ನ ತ್ವಕ್ಕಿನಲ್ಲಿ ವಿಭೂತಿ ಎನ್ನ ನೇತ್ರದಲ್ಲಿ ರುದ್ರಾಕ್ಷಿ ಎನ್ನ ಶ್ರೋತ್ರದಲ್ಲಿ ಪಂಚಾಕ್ಷರಿ ಇಂತಿವು ಅಷ್ಟಾವರಣಸ್ವರೂಪವಾಗಿ ಎನ್ನೊಳು ತನ್ನ ಕರುಣಕೃಪೆಯ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ