Index   ವಚನ - 6    Search  
 
ಲಿಂಗಾಂಗಸಂಗಸಮರಸದ ವಿವರವ ಕರುಣಿಸು ಸ್ವಾಮಿ. ಕೇಳೈ ಮಗನೆ: ಮುಖಪ್ರಕ್ಷಾಲನ ಮಾಡುವಾಗ ಲಿಂಗಕ್ಕೆ ಮಜ್ಜನವ ನೀಡಿದುದು ಇಷ್ಟಲಿಂಗದ ಮಜ್ಜನ. ಲಿಂಗಾರ್ಚನೆ ಮಾಡುವಾಗ ಕ್ರಿಯೆಯಿಟ್ಟು ಲಿಂಗಕ್ಕೆ ಮಜ್ಜನವ ನೀಡಿದುದು ಪ್ರಾಣಲಿಂಗದ ಮಜ್ಜನ. ಲಿಂಗಾರ್ಚನೆ ಮುಗಿದ ಬಳಿಕ ಮಜ್ಜನ ನೀಡಿದುದು ಭಾವಲಿಂಗದ ಮಜ್ಜನವೆಂದರಿವುದು. ಇನ್ನು ವಿಭೂತಿಯ ಧರಿಸುವ ಕ್ರಮವು: ಸ್ನಾನ ಧೂಳನ ಧಾರಣ. ಸ್ನಾನ ಮಾಡಿದುದು ಇಷ್ಟಲಿಂಗದಲ್ಲ; ಧೂಳನವ ಮಾಡಿದುದು ಪ್ರಾಣಲಿಂಗದಲ್ಲ; ಧಾರಣವ ಮಾಡಿದುದು ಭಾವಲಿಂಗದಲ್ಲಿ. ಇನ್ನು ಲಿಂಗಪೂಜೆ; ಹೊರಗಣ ಪುಷ್ಪ ಇಷ್ಟಲಿಂಗಕ್ಕೆ; ಒಳಗಣ ಕಮಲದ ಪುಷ್ಪ ಪ್ರಾಣಲಿಂಗಕ್ಕೆ; ಬಯಲ ಪುಷ್ಪ ಭಾವಲಿಂಗಕ್ಕೆಂದರಿವುದು. ಇನ್ನು ಜಪದ ಕ್ರಮ; ಹನ್ನೆರಡು ಪ್ರಣವ ಮಾಡಲಾಗಿ ಪಂಚತತ್ತ್ವವಡೆದ ಜಪ ಇಷ್ಟಲಿಂಗಕ್ಕೆ; ಒಳಗಣ ಜಪ ಇಪ್ಪತ್ತೊಂದು ಸಾವಿರದಾರುನೂರು ಪ್ರಾಣಲಿಂಗಕ್ಕೆ; ಬಯಲ ಜಪ ಭಾವಲಿಂಗಕ್ಕೆಂದರಿವುದು. ಇನ್ನು ತ್ರಿಕಾಲಪೂಜೆ: ಉದಯಕಾಲದ ಪೂಜೆ ಇಷ್ಟಲಿಂಗಕ್ಕೆ; ಮಧ್ಯಾಹ್ನದ ಪೂಜೆ ಪ್ರಾಣಲಿಂಗಕ್ಕೆ; ಸಾಯಂಕಾಲದ ಪೂಜೆ ಭಾವಲಿಂಗಕ್ಕೆಂದರಿವುದು. ಇನ್ನು ಪ್ರಸಾದತ್ರಯದ ವಿವರ: ಶುದ್ಧಪ್ರಸಾದ ಇಷ್ಟಲಿಂಗಕ್ಕೆ; ಸಿದ್ಧಪ್ರಸಾದ ಪ್ರಾಣಲಿಂಗಕ್ಕೆ; ಪ್ರಸಿದ್ಧಪ್ರಸಾದ ಭಾವಲಿಂಗಕ್ಕೆಂದರಿವುದು. ಇನ್ನು ಭೋಗತ್ರಯದ ವಿವರ: ಭೋಜನಸುಖವು ಇಷ್ಟಲಿಂಗಕ್ಕೆ; ತನ್ನ ಸ್ತ್ರೀಸಂಗದಸುಖವು ಪ್ರಾಣಲಿಂಗಕ್ಕೆ; ವಸ್ತ್ರಾಭರಣದ ಸುಖವು ಭಾವಲಿಂಗಕ್ಕೆಂದರಿವುದು. ಲಿಂಗಾಂಗಿಯ ಚರಿತ್ರದ ವಿವರ; ನಿಂತಿರ್ದುದು ಇಷ್ಟಲಿಂಗಕ್ಕೆ; ಕುಂತಿರ್ದುದು ಪ್ರಾಣಲಿಂಗಕ್ಕೆ ಮಲಗಿರ್ದುದು ಭಾವಲಿಂಗಕ್ಕೆಂದರಿವುದು. ಇನ್ನು ನಡೆವುದು ಇಷ್ಟಲಿಂಗವು; ನುಡಿವುದು ಪ್ರಾಣಲಿಂಗವು; ಪಿಡಿದುನೋಡುವ ಸುಖವು ಭಾವಲಿಂಗವು ಎಂದರಿವುದು. ಇನ್ನು ಇಷ್ಟಲಿಂಗದ ಗರ್ಭದಲ್ಲಿ ತನ್ನ ಶರೀರವನಿಟ್ಟು ಬ್ರಹ್ಮರಂಧ್ರದಲ್ಲಿರ್ದ ಸಹಸ್ರದಳ ಕಮಲದೊಳಗೆ ಆ ಇಷ್ಟಲಿಂಗವ ಮುಳುಗಿಸುವುದೀಗ ಲಿಂಗಾಂಗವು. ಇನ್ನು ನೇತ್ರಸ್ಥಾನದಲ್ಲಿರ್ದ ವಿಶ್ವಜೀವನ ಜಾಗ್ರಾವಸ್ಥೆ ಸ್ಥೂಲತನುವಿನ ವ್ಯವಹರಣೆ ಇಷ್ಟಲಿಂಗವೆಂದರಿವುದು. ಕಂಠಸ್ಥಾನದಲ್ಲಿರ್ದ ತೈಜಸಜೀವನ ಸ್ವಪ್ನಾವಸ್ಥೆ ಸೂಕ್ಷ್ಮತನುವಿನ ವ್ಯವಹರಣೆ ಪ್ರಾಣಲಿಂಗವೆಂದರಿವುದು. ಹೃದಯಸ್ಥಾನದಲ್ಲಿರ್ದ ಪ್ರಾಜ್ಞಜೀವನ ಸುಷುಪ್ತಾವಸ್ಥೆ ಕಾರಣತನುವಿನ ವ್ಯವಹರಣೆ ಭಾವಲಿಂಗವೆಂದರಿವುದು. ಇನ್ನು ಆಯತ ಇಷ್ಟಲಿಂಗವು ಸ್ವಾಯತ ಪ್ರಾಣಲಿಂಗವು ಸನ್ನಹಿತ ಭಾವಲಿಂಗವು ಎಂದರಿವುದು. ಇನ್ನು ಪಾತಾಳಲೋಕವನೊಳಕೊಂಡದ್ದು ಇಷ್ಟಲಿಂಗವಹುದು; ಮರ್ತ್ಯಲೋಕವನೊಳಕೊಂಡದ್ದು ಪ್ರಾಣಲಿಂಗವಹುದು; ಸ್ವರ್ಗಲೋಕವನೊಳಕೊಂಡದ್ದು ಭಾವಲಿಂಗವಹುದು. ಈರೇಳುಲೋಕವನೊಳಕೊಂಡದ್ದು ಪ್ರಾಣಲಿಂಗವು; ಚರ್ಮಚಕ್ಷುವಿಗೆ ಅಗೋಚರವು, ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಟ್ಟುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಕ್ಕೆ ಎರಡು ನೇತ್ರಂಗಳು ಪುಷ್ಪವಾಗಿಪ್ಪುದೆ ಲಿಂಗಾಂಗಸಂಗವು. ಇನ್ನು ರೂಪಾಗಿ ಬಂದ ಪದಾರ್ಥವನು ಭೋಗಿಸುವದು ಇಷ್ಟಲಿಂಗವು ತಾನೆ. ರುಚಿಯಾಗಿ ಬಂದ ಪದಾರ್ಥವನು ಭೋಗಿಸುವದು ಪ್ರಾಣಲಿಂಗವು ತಾನೆ. ತೃಪ್ತಿಯಾಗಿ ಬಂದ ಪದಾರ್ಥವನು ಭೋಗಿಸುವದು ಭಾವಲಿಂಗವು ತಾನೆ. ಸಾಕ್ಷಿ: "ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಂ | ಭಾವಲಿಂಗಾರ್ಪಿತಂ ತೃಪ್ತಿರಿತಿ ಭೇದೋ ವರಾನನೇ ||" ಎಂದುದಾಗಿ, ಅಂಗವೆಂದರೆ ರೂಪು, ಮನವೆಂದರೆ ರುಚಿ, ಸಂತೋಷವೆಂದರೆ ತೃಪ್ತಿ ಎಂದರಿವುದು. ಕ್ರಿಯೆವಿಡಿದು ಕಾಯಾರ್ಪಣ ಮಾಡುವ ಷಡ್ವಿಧಲಿಂಗದಸುಖವ ಭೋಗಿಸುವಾತ ಇಷ್ಟಲಿಂಗವು ತಾನೆ. ಜ್ಞಾನವಿಡಿದು ಕರಣಾರ್ಪಣವ ಮಾಡುವ ಛತ್ತೀಸಲಿಂಗದ ಸುಖವ ಭೋಗಿಸುವಾತ ಪ್ರಾಣಲಿಂಗ ತಾನೆ. ಭಾವವಿಡಿದು ಪರಿಣಾಮಾರ್ಪಣ ಮಾಡುವ ಇನ್ನೂರ ಹದಿನಾರು ಲಿಂಗದ ಸುಖವ ಭೋಗಿಸುವಾತ ಭಾವಲಿಂಗವು ತಾನೆ. ಸಾವಿರದ ಇನ್ನೂರಾ ತೊಂಬತ್ತಾರು ಲಿಂಗ ಇಂತಪ್ಪ ಬಯಲಲಿಂಗವು ಲೆಕ್ಕಕ್ಕೆ ನಿಲುಕದು. ಬಯಲ ಹಸ್ತದಿಂದ ಪೂಜಿಸಿ ಆ ಬಯಲಲಿಂಗದೊಳಗೆ ತಾನಾಗಿ ತನ್ನೊಳಗೆ ಬಯಲ ಲಿಂಗವು ಬೆರದುದು ಇದು ಲಿಂಗಾಂಗಸಂಗ ಸಮರಸವು. ಇದು 'ಶರಣಸತಿ ಲಿಂಗಪತಿ' ನ್ಯಾಯವು. ಇದು ತ್ರಿವಿಧ ತನುವ ತ್ರಿಲಿಂಗಕ್ಕೆ ಅರ್ಪಿಸುವ ಕ್ರಮವು. ಇಂತಿವೆಲ್ಲ ಕ್ರಮವನೊಳಕೊಂಡು ಇಷ್ಟಬ್ರಹ್ಮವು ತಾನೆಯೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಅಂಗಸಂಗಿಗಳೆತ್ತಬಲ್ಲರು ನೋಡಾ