Index   ವಚನ - 8    Search  
 
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಮಹಾಘನಲಿಂಗವು ಭಕ್ತಂಗೆ ಸಾಕಾರವಾಗಿ ತನುತ್ರಯಕ್ಕೆ ಇಷ್ಟ-ಪ್ರಾಣ-ಭಾವಲಿಂಗ ಸ್ವರೂಪವಾಗಿರ್ದ ಕಾರಣ, ನಡೆವುತ್ತ ನುಡಿವುತ್ತ ಸರ್ವಾವಸ್ಥೆಯಲ್ಲಿ ಲಿಂಗದೊಳಗಿಪ್ಪಾತನೆ ಭಕ್ತ. ಹೀಗಲ್ಲದೆ ನಿತ್ಯವಾದ ಲಿಂಗಕ್ಕೆ ಕೇಡ ಬಯಸುವ ತನ್ನ ಸಂಕಲ್ಪ ವಿಕಲ್ಪ ಸಂದೇಹದಿಂದ ನುಡಿದಡೆ ತನ್ನ ಭಾವಕ್ಕಲ್ಲದೆ ಆ ಮಹಾಘನಲಿಂಗವ ನಂಬಿದವರಿಗೆ ಇಂಬಾಗಿಪ್ಪನು ವಿಶ್ವಾಸದಿಂದ. ವಿಶ್ವಾಸದಿಂದ ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆ ಲಿಂಗವಾದುದಿಲ್ಲವೆ? ಸದ್ಭಾವದಿಂದ ಬಳ್ಳೇಶಮಲ್ಲಯ್ಯಂಗೆ ಬಳ್ಳ ಲಿಂಗವಾದುದಿಲ್ಲವೆ? ಭಾವದಿಂದ ನಂಬೆಣ್ಣಂಗೆ ಅಂಗನೆಯ ಕುಚ ಲಿಂಗವಾದುದಿಲ್ಲವೆ? ವಿಶ್ವಾಸದಿಂದ ಕೆಂಬಾವಿ ಭೋಗಣ್ಣಂಗೆ ಲಿಂಗ ಒಡನೆ ಹೋದುದಿಲ್ಲವೆ? ಮತ್ತೆ ಇಷ್ಟಲಿಂಗದೊಳಗೆ ನೀಲಲೋಚನೆಯಮ್ಮನವರ ಶರೀರವೆ ಏಕಾಕಾರವಾಗಲಿಲ್ಲವೆ? ಸಾಕ್ಷಿ: ''ಕರ್ಪೂರಮನಲಗ್ರಾಹ್ಯಂ ರೂಪಂ ನಾಸ್ತಿ ನಿರಂತರಂ | ತಥಾ ಲಿಂಗಾಂಗಸಂಯೋಗೇ ಅಂಗೋ ನಿರ್ವಯಲಂ ಗತಃ ||" ಎಂದುದಾಗಿ, ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಕರ್ಮದ ಫಲವು. ಇಂತಪ್ಪ ಮಹಾಲಿಂಗದ ನಿಲವ ಅರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ದುರ್ಭಾವಕರು ಎತ್ತ ಬಲ್ಲರು ನೋಡಾ