Index   ವಚನ - 12    Search  
 
ಎನ್ನ ಪಶ್ಚಿಮದಲ್ಲಿ ನಿರಂಜನಪ್ರಣಮವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಶಿಖೆಯಲ್ಲಿ ಬಸವತ್ರಯಾಕ್ಷರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ಅಉಮಾಕ್ಷರ ಪ್ರಸಾದ ಪಂಚಾಕ್ಷರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ವಿಶುದ್ಧಿಯಲ್ಲಿ ಯಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಅನಾಹತದಲ್ಲಿ ವಾಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಮಣಿಪೂರಕದಲ್ಲಿ ಶಿಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಸ್ವಾಧಿಷ್ಠಾನದಲ್ಲಿ ಮಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಆಧಾರದಲ್ಲಿ ನಕಾರವಾಗಿ ನಿಂದಾತ ನಮ್ಮ ಬಸವಣ್ಣ. ಮತ್ತಂ, ಮಸ್ತಕದಲ್ಲಿ ಹಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಬಲದ ಬದಿಯಲ್ಲಿ ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಎಡದ ಬದಿಯಲ್ಲಿ ಅಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಹೃದಯದಲ್ಲಿ ಉಕಾರವಾಗಿ ನಿಂದಾತ ನಮ್ಮ ಬಸವಣ್ಣ. ಎನ್ನ ಬೆನ್ನಿನಲ್ಲಿ ಮಕಾರವಾಗಿ ನಿಂದಾತ ನಮ್ಮ ಬಸವಣ್ಣ. ಸಾಕ್ಷಿ : "ಅಕಾರಂ ವಾಮಭಾಗಂ ಚ ಉಕಾರಂ ಪೂರ್ವಮೇವ ಚ | ಮಕಾರಂ ಪಶ್ಚಿಮಶ್ಚೈವ ಓಂಕಾರಂ ದಕ್ಷಿಣಸ್ತಥಾ | ಹಕಾರಂ ಊರ್ಧ್ವಭಾಗಂ ಚ ಪಂಚ ಪ್ರಣವ ಕೀರ್ತಿತಾ ||" ಎಂದುದಾಗಿ, ಎನ್ನ ಲಲಾಟದಲ್ಲಿ ಓಂಕಾರವಾಗಿ ನಿಂದಾತ ಬಸವಣ್ಣ. ಎನ್ನ ಬಲದ ಭುಜದಲ್ಲಿ ನಕಾರವಾಗಿ ನಿಂದಾತ ಬಸವಣ್ಣ. ಎನ್ನ ಎಡದ ಭುಜದಲ್ಲಿ ಮಕಾರವಾಗಿ ನಿಂದಾತ ಬಸವಣ್ಣ. ಎನ್ನ ನಾಭಿಯಲ್ಲಿ ಶಿಕಾರವಾಗಿ ನಿಂದಾತ ಬಸವಣ್ಣ. ಎನ್ನ ಬಲದ ತೊಡೆಯಲ್ಲಿ ವಕಾರವಾಗಿ ನಿಂದಾತ ಬಸವಣ್ಣ. ಎನ್ನ ಎಡದ ತೊಡೆಯಲ್ಲಿ ಯಕಾರವಾಗಿ ನಿಂದಾತ ಬಸವಣ್ಣ. ಸಾಕ್ಷಿ : 'ಓಂಕಾರಂ ವದನಂ ದೇವಿ ನಮಸ್ಕಾರಂ ಭುಜದ್ವಯಂ | ಶಿಕಾರಂ ದೇಹಮಧ್ಯಸ್ತು ವಾಕಾರಂ ಚ ಪದದ್ವಯಂ ||' ಎಂದುದಾಗಿ, ಎನ್ನ ಪಂಚಭೂತಾತ್ಮದಲ್ಲಿ ಓಂಕಾರವಾಗಿ ನಿಂದಾತ ಬಸವಣ್ಣ. ಎನ್ನ ದಶ ಇಂದ್ರಿಯದಲ್ಲಿ ನಕಾರವಾಗಿ ನಿಂದಾತ ಬಸವಣ್ಣ. ಎನ್ನ ಮನಪಂಚಕದಲ್ಲಿ ಮಕಾರವಾಗಿ ನಿಂದಾತ ಬಸವಣ್ಣ. ಎನ್ನ ಪ್ರಾಣದಲ್ಲಿ ಶಿಕಾರವಾಗಿ ನಿಂದಾತ ಬಸವಣ್ಣ. ಎನ್ನ ದಶವಾಯುಗಳಲ್ಲಿ ವಾಕಾರವಾಗಿ ನಿಂದಾತ ಬಸವಣ್ಣ. ಎನ್ನ ತ್ರಿಗುಣದಲ್ಲಿ ಯಕಾರವಾಗಿ ನಿಂದಾತ ಬಸವಣ್ಣ. ಸಾಕ್ಷಿ : "ಓಂಕಾರಂ ಪಂಚಭೂತಾತ್ಮಕಂ ನಕಾರಂ ದಶ ಇಂದ್ರಿಯಂ | ಮಕಾರಂ ಮನಪಂಚಕಂ ಶಿಕಾರಂ ಪ್ರಾಣನಾಯಕಂ | ವಾಕಾರಂ ದಶವಾಯೂನಾಂ ಯಕಾರಂ ತ್ರಿಗುಣಂ ಭವೇತ್ ||" ಎಂದುದಾಗಿ, ಶಿವನ ಆರು ಮುಖದಿಂದ ಆರು ಪ್ರಣವಂಗಳು ಪುಟ್ಟಿದವು. ಈ ಆರು ಪ್ರಣವಂಗಳನರಿಯದೆ ಪೂಜೆಯ ಮಾಡಿದಡೆ ಆ ಪೂಜೆ ನಿಷ್ಫಲಂ. ಸಾಕ್ಷಿ : "ಷಡಕ್ಷರ ಸಮಾಖ್ಯಾತಂ ಷಡಾನನ ಸಮನ್ವಿತಂ | ಷಡ್ಭೇದಂ ಯೋ ನ ಜಾನಾತಿ ಪೂಜಾ [ಸಾ] ನಿಷ್ಫಲಂ ಭವೇತ್ ||" ಎಂದುದಾಗಿ, ಎನ್ನ ಸರ್ವಾಂಗದಲ್ಲಿ ಸರ್ವಮಯ ಮಂತ್ರಮೂರ್ತಿಯಾಗಿ ನಿಂದಾತ ನಮ್ಮ ಬಸವಣ್ಣನೆಂದು ಎನ್ನೊಳಗೆ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ