Index   ವಚನ - 34    Search  
 
ಇಂತೀ ಅಷ್ಟಾವರಣವ ಸದ್ಗುರುಮುಖದಿಂ ಚಿದಂಗಚಿದ್ಘನಲಿಂಗದ ಮಧ್ಯದಲ್ಲಿ ಸಂಬಂಧವಿಟ್ಟು, ಏಕಲಿಂಗನಿಷ್ಠಾಪರತ್ವದಿಂದ ಸ್ಥೂಲಕಂಥೆಯ ಧರಿಸಿ ಸತ್ಕಾಯಕ-ಸತ್ಕ್ರಿಯಾ-ಸಮ್ಯಜ್ಞಾನ-ಸದ್ಭಕ್ತಿ- ಸದಾಚಾರಸನ್ನಿಹಿತರೆ ನೂತನಗಣಂಗಳೆನಿಸುವರು ನೋಡ. ಅದರಿಂ ಮೇಲೆ ಚಿದಂಗ-ಚಿತ್ಪ್ರಾಣಾಂಗದ ಮಧ್ಯದಲ್ಲಿ ಚಿದ್ಘನಲಿಂಗ-ಚಿತ್ಪ್ರಾಣಲಿಂಗವ ಸದ್ಗುರುಮುಖದಿಂ ಸಂಬಂಧವಿಟ್ಟು ಆ ಲಿಂಗದ ಮಧ್ಯದಲ್ಲಿ ಸಾಕಾರ-ನಿರಾಕಾರವಾದ ಷೋಡಶಾವರಣವ ಸಂಪೂರ್ಣವಮಾಡಿಕೊಂಡು, ಸೂಕ್ಷ್ಮತನುವೆಂಬ ಕಂಥೆಯ ಧರಿಸಿ ಕಂಗಳಾಲಯದ ಜ್ಯೋತಿರ್ಲಿಂಗದ ಮಧ್ಯದಲ್ಲಿ ಮನವ ಮುಳುಗಿಸುವರೆ ಆದಿಗಣಂಗಳೆನಿಸುವರು ನೋಡ. ಅದರಿಂ ಮೇಲೆ, ಚಿದ್ಘನ ತ್ರಿವಿಧಾಂಗ-ಚಿದ್ಘನ ತ್ರಿವಿಧಲಿಂಗವ ಸದ್ಗುರುಮುಖದಿಂ ಸಂಬಂಧಿಸಿಕೊಂಡು ಆ ಲಿಂಗಾಂಗದ ಮಧ್ಯದಲ್ಲಿ ಕ್ರಿಯಾಷ್ಟಾವರಣ-ಜ್ಞಾನಾಷ್ಟಾವರಣ-ಮಹಾಜ್ಞಾನಾಷ್ಟಾವರಣವ ಸಂಬಂಧವಿಟ್ಟು, ಕಾರಣತನುವೆಂಬ ಕಂಥೆಯ ಧರಿಸಿ, ಹೃತ್ಕಮಲಮಧ್ಯದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗಮಧ್ಯದಲ್ಲಿ ಭಾವವ ಮುಳುಗಿಸಿ ಬಚ್ಚಬರಿಯಾನಂದದಲ್ಲಿ ಪರಿಪೂರ್ಣಾನಂದದಿಂದಾಚರಿಸುವರೆ ಅನಾದಿಗಣಂಗಳೆನಿಸುವರು ನೋಡ. ಅದರಿಂ ಮೇಲೆ, ಚಿದ್ಘನ ಅಷ್ಟಾಂಗದ ಮಧ್ಯದಲ್ಲಿ ಚಿದ್ಘನ ಅಷ್ಟಲಿಂಗಂಗಳ ಸದ್ಗುರುಮುಖದಿಂ ಧರಿಸಿ, ಆ ಲಿಂಗಾಂಗದ ಮಧ್ಯದಲ್ಲಿ ಅರುವತ್ತುನಾಲ್ಕು ತೆರದಾವರಣವ ಸಂಬಂಧಿಸಿಕೊಂಡು ತಮ್ಮ ಸರ್ವಾಂಗದಲ್ಲಿ ಅಷ್ಟವಿಧಕಮಲಂಗಳ ಕಂಡು, ಆ ಕಮಲಮಧ್ಯದಲ್ಲಿ ನೆಲಸಿರ್ಪ ಚತುರ್ವಿಧ ಬಿಂದುಲಿಂಗ, ಷಡ್ವಿಧ ಧಾತುಲಿಂಗ, ದಶವಿಧ ಕ್ಷೇತ್ರಲಿಂಗ, ದ್ವಾದಶ ವಿಕೃತಿಲಿಂಗ, ಷೋಡಶ ಕಳಾಲಿಂಗ, ದ್ವಿವಿಧ ವಿದ್ಯಾಲಿಂಗ, ಸಹಸ್ರ ಶಿವಕಳಾಲಿಂಗ, ತ್ರಿವಿಧ ವಿವೇಕಲಿಂಗ ಇಂತೀ ಅಷ್ಟವಿಧಕಮಲಂಗಳ ಮಧ್ಯದಲ್ಲಿ ನೆಲಸಿರ್ಪ ಅಷ್ಟವಿಧಲಿಂಗಗಳ ಅಷ್ಟವಿಧ ಹಸ್ತಗಳಿಂದ, ಅಷ್ಟವಿಧಾರ್ಚನೆ, ಷೋಡಶೋಪಚಾರಂಗಳ ಮಾಡಿ, ಎರಡಳಿದು ಏಕರೂಪವಾಗಿ ನಿರಾವಯ ಕಂಥೆಯ ಧರಿಸಿ, ಪರತತ್ವ ಜ್ಯೋತಿರ್ಮಯಲಿಂಗದೊಳಗೆ ಉರಿಯುಂಡ ಕರ್ಪುರದಂತೆ ಸಮರಸವಾದರು ನೋಡ. ಅವರಾರೆಂದಡೆ : ರುದ್ರಲೋಕದ ರುದ್ರಗಣಂಗಳು, ಶಿವಲೋಕದ ಶಿವಗಣಂಗಳು, ದೇವಲೋಕದ ದೇವಗಣಂಗಳು, ನಾಗಲೋಕದ ನಾಗಗಣಂಗಳು, ಶಾಂಭವಲೋಕದ ಶಾಂಭವಗಣಂಗಳು ಮುಂತಾದವರು ಬಯಲೊಳಗೆ ಮಹಾಬಯಲು ಬೆರದಂತಾದರು ನೋಡ. ಇಂತೀ ಸರ್ವಾಚಾರಸಂಪತ್ತಿನಾಚರಣೆಯನಾಚರಿಸುವರೆ ನಿರಾವಯಗಣಂಗಳೆನಿಸುವರು ನೋಡ, ಸಂಗನಬಸವೇಶ್ವರ