Index   ವಚನ - 36    Search  
 
ಎಲೆ ವರಕುಮಾರದೇಶಿಕೇಂದ್ರನೆ, ನನಗೂ ನಿನಗೂ ಚಿನ್ನ-ಬಣ್ಣ, ಪುಷ್ಪ-ಪರಿಮಳದೋಪಾದಿಯಲ್ಲಿ ಭಿನ್ನವಿಲ್ಲವಯ್ಯ. ನಾನು-ನೀನು ಒಂದೇ ವಸ್ತು ನೋಡ! ನನಗೂ ನಿನಗೂ ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುವೆ ಸದ್ಗುರು ಬಸವೇಶ್ವರಸ್ವಾಮಿಗಳಯ್ಯ. ನನಗೂ ನಿನಗೂ ಕ್ರಿಯಾಲಿಂಗ, ಜ್ಞಾನಲಿಂಗ, ಮಹಾಜ್ಞಾನಲಿಂಗವೆ ಚೆನ್ನಬಸವೇಶ್ವರಸ್ವಾಮಿಗಳಯ್ಯ. ನನಗೂ ನಿನಗೂ ಕ್ರಿಯಾಜಂಗಮ-ಜ್ಞಾನಜಂಗಮ- ಮಹಾಜ್ಞಾನಜಂಗಮವೆ ಮಹಾಪ್ರಭುಸ್ವಾಮಿಗಳಯ್ಯ. ನನಗೂ ನಿನಗೂ ದೀಕ್ಷಾಗುರು ಪಾದೋದಕ, ಶಿಕ್ಷಾಗುರು ಪಾದೋದಕ, ಜ್ಞಾನಗುರು ಪಾದೋದಕವೆ ನೀಲಲೋಚನೆ ತಾಯಿಗಳಯ್ಯ. ನನಗೂ ನಿನಗೂ ಶುದ್ಧಪ್ರಸಾದ, ಸಿದ್ಧಪ್ರಸಾದ, ಪ್ರಸಿದ್ಧಪ್ರಸಾದವೆ ಮರುಳಶಂಕರದೇವರಯ್ಯ. ನನಗೂ ನಿನಗೂ ಕಾಲಹರಭಸಿತ, ಕರ್ಮಹರಭಸಿತ, ದುರಿತಹರಭಸಿತವೆ ಮಹಾದೇವಿಯಕ್ಕಗಳಯ್ಯ. ನನಗೂ ನಿನಗೂ ತ್ರಿವಿಧವರ್ಣದ ರುದ್ರಾಕ್ಷಿಯೆ ಮಡಿವಾಳಸ್ವಾಮಿಗಳಯ್ಯ. ನನಗೂ ನಿನಗೂ ತ್ರ್ಯಕ್ಷರ-ಪಂಚಾಕ್ಷರ-ಷಡಕ್ಷರ ಮಂತ್ರವೆ ಸಿದ್ಧರಾಮಸ್ವಾಮಿಗಳಯ್ಯ. ನನಗೂ ನಿನಗೂ ಸಮಸ್ತ ಪ್ರಮಥಗಣಂಗಳ ಸ್ಮರಣೆಯೆ ಸರ್ವಾಚಾರಸಂಪತ್ತಿನಾಚರಣೆಯಯ್ಯ. ನನಗೂ ನಿನಗೂ ಘನಗುರುಶಾಂತಮಲ್ಲೇಶ್ವರ, ಚೆನ್ನನಂಜೇಶ್ವರ, ಸ್ವತಂತ್ರಸಿದ್ಧಲಿಂಗೇಶ್ವರನ ಕೃಪೆಯೆ ಮಹಾಪ್ರಸಾದ ನೋಡ, ಸಂಗನಬಸವೇಶ್ವರ.