ಅಯ್ಯ, ನಿನ್ನ ಚಿದಂಗದ ಷಟ್ಸ್ಥಾನಂಗಳಲ್ಲಿ
ಎಪ್ಪತ್ತೈದು ತತ್ತ್ವಂಗಳು ಅಡಗಿರ್ಪವಯ್ಯ.
ಚಿದ್ಘನಲಿಂಗದ ಷಟ್ಸ್ಥಾನಂಗಳಲ್ಲಿ
ಹದಿನೆಂಟು ತತ್ತ್ವಂಗಳು ಅಡಗಿರ್ಪವಯ್ಯ.
ಆ ಚಿದಂಗ ಚಿದ್ಘನಲಿಂಗದ ಮಧ್ಯದಲ್ಲಿ ಬೆಳಗುವ
ಅಖಂಡ ಮಹಾಜ್ಯೋತಿಪ್ರಣಮದ ಷಟ್ಸ್ಥಾನಂಗಳಲ್ಲಿ
ಅಷ್ಟವಿಧತತ್ವಂಗಳು ಅಡಗಿರ್ಪವಯ್ಯ.
ಆ ತತ್ವಂಗಳ ವಿಭಾಗೆಯೆಂತೆಂದಡೆ:
ಪೃಥ್ವೀತತ್ತ್ವ ಇಪ್ಪತ್ತೈದು, ಅಪ್ಪುತತ್ತ್ವ ಇಪ್ಪತ್ತು,
ಅಗ್ನಿತತ್ತ್ವ ಹದಿನೈದು, ವಾಯುತತ್ವ ಹತ್ತು, ಆಕಾಶತತ್ತ್ವ ಐದು.
ಇಂತು ಎಪ್ಪತ್ತೈದು ತತ್ತ್ವಂಗಳು ಆತ್ಮತತ್ವ ಒಂದರಲ್ಲಿ ಅಡಗಿ,
ಇಂಥ ಅನಂತ ಅನಂತ ಆತ್ಮರು ಔದುಂಬರ ವೃಕ್ಷಕ್ಕೆ
ಫಲ ತೊಂತಿದೋಪಾದಿಯಲ್ಲಿ
ಆ ಚಿದಂಗಕ್ಕೆ ಅನಂತ ಆತ್ಮತತ್ತ್ವಂಗಳು
ತೊಂತಿಕೊಂಡಿರ್ಪವು ನೋಡ.
ಅಂಥ ಚಿದಂಗ ಹದಿನೆಂಟು ಪ್ರಣಮರೂಪಿನಿಂದ
ಚಿದ್ಘನಲಿಂಗವನಾಶ್ರೈಸಿರ್ಪುದು ನೋಡ.
ಆ ಚಿದ್ಘನಲಿಂಗವು ಅಷ್ಟವಿಧಸಕೀಲಂಗಳಿಂದ
ಅಖಂಡ ಮಹಾಜ್ಯೋತಿಪ್ರಣಮವನಾಶ್ರೈಸಿರ್ಪುದು ನೋಡ.
ಇಂತು ನೂರೊಂದು ಸಕೀಲಂಗಳ ತತ್ವರೂಪಿನಿಂದ ತಿಳಿದು
ಅಂತು ಅಂಗಲಿಂಗಸಂಗದಲ್ಲಿ ಅಡಗಿರುವ
ನೂರೊಂದುತತ್ವ ಸಕೀಲಂಗಳ ನೂರೊಂದುಸ್ಥಲದಲ್ಲಿ ನೆಲೆಗೊಳಿಸಿ
ಪರತತ್ವ ಲಿಂಗಲೀಲೆಯಿಂದ ನಿಂದ ನಿಲುಕಡೆಯ ಅನುಗ್ರಹದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಸ್ವತಂತ್ರಮೂರ್ತಿ
ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ.
Art
Manuscript
Music
Courtesy:
Transliteration
Ayya, ninna cidaṅgada ṣaṭsthānaṅgaḷalli
eppattaidu tattvaṅgaḷu aḍagirpavayya.
Cidghanaliṅgada ṣaṭsthānaṅgaḷalli
hadineṇṭu tattvaṅgaḷu aḍagirpavayya.
Ā cidaṅga cidghanaliṅgada madhyadalli beḷaguva
akhaṇḍa mahājyōtipraṇamada ṣaṭsthānaṅgaḷalli
aṣṭavidhatatvaṅgaḷu aḍagirpavayya.
Ā tatvaṅgaḷa vibhāgeyentendaḍe:
Pr̥thvītattva ippattaidu, apputattva ippattu,
agnitattva hadinaidu, vāyutatva hattu, ākāśatattva aidu.
Intu eppattaidu tattvaṅgaḷu ātmatatva ondaralli aḍagi,
intha ananta ananta ātmaru audumbara vr̥kṣakkePhala tontidōpādiyalli
ā cidaṅgakke ananta ātmatattvaṅgaḷu
tontikoṇḍirpavu nōḍa.
Antha cidaṅga hadineṇṭu praṇamarūpininda
cidghanaliṅgavanāśraisirpudu nōḍa.
Ā cidghanaliṅgavu aṣṭavidhasakīlaṅgaḷinda
akhaṇḍa mahājyōtipraṇamavanāśraisirpudu nōḍa.
Intu nūrondu sakīlaṅgaḷa tatvarūpininda tiḷidu
antu aṅgaliṅgasaṅgadalli aḍagiruvaNūrondutatva sakīlaṅgaḷa nūrondusthaladalli nelegoḷisi
paratatva liṅgalīleyinda ninda nilukaḍeya anugrahadīkṣe.
Intuṭendu śrīguru niṣkaḷaṅka svatantramūrti
cannabasavarājēndranu nirlajja śāntaliṅgadēśikōttamaṅge
nirūpamaṁ koḍutirdaru nōḍa
saṅganabasavēśvara.