Index   ವಚನ - 10    Search  
 
ಕಲಿಯುಗ ಮೊದಲಾದ ಇಪ್ಪತ್ತೊಂದು ಯುಗದಲ್ಲಿ ಅದಾವ ರೂಪವಾಗಿ ಇದ್ದನಯ್ಯಾ ಬಸವಣ್ಣ! ಬಲ್ಲರೆ, ಹೇಳಿ, ಅರಿಯದಿದ್ದರೆ ನೀವು ಕೇಳಿ. ಅದು ಎಂತೆಂದಡೆ: ಆದಿಯುಗದಲ್ಲಿ ಶರಣನೆಂಬ ಬಸವಣ್ಣ; ಜಂಗಮನೆಂಬ ನಿರಂಜನ. ಅನಾದಿಯೆಂಬ ಯುಗದಲ್ಲಿ ಬಸವಣ್ಣನೆ ಭಕ್ತ; ಜಂಗಮವೆ ಸದಾಶಿವಲಿಂಗ. ಅವ್ಯಕ್ತನೆಂಬ ಯುಗದಲ್ಲಿ ಬಸವನೆ ಅಲ್ಲಮ; ಜಂಗಮವೆ ಪೀಠಾಧಾರವೆಂಬ ಲಿಂಗ. ವ್ಯಕ್ತನೆಂಬ ಯುಗದಲ್ಲಿ ಬಸವನೆ ಬೊಮ್ಮಣ್ಣ; ಜಂಗಮವೆ ಭೂತೇಶ್ವರಲಿಂಗ. ಮಣಿರಣನೆಂಬ ಯುಗದಲ್ಲಿ ಬಸವನೆ ಆರೋಗ್ಯಕ್ಕೆ ವೈದ್ಯನಾದ. ಜಂಗಮವೆ ಪ್ರಂಚವಕ್ತ್ರನೆಂಬ ಲಿಂಗ. ವಿಶ್ವಾರಣನೆಂಬ ಯುಗದಲ್ಲಿ ಬಸವನೆ ಪೀತಶಂಭು; ಜಂಗಮವೆ ಏಕಭರಿತನೆಂಬ ಲಿಂಗ. ಅಲಂಕೃತನೆಂಬ ಯುಗದಲ್ಲಿ ಬಸವನೆ ಪ್ರಭುದೇವರು; ಜಂಗಮವೆ ಸರ್ವೇಶ್ವರಲಿಂಗ. ಕೃತಯುಗದಲ್ಲಿ ಬಸವನೆ ಗಜ್ಜಯ್ಯನಾದ; ಜಂಗಮವೆ ತ್ರಿಪುರಾಂತಕಲಿಂಗ. ತ್ರೇತಾಯುಗದಲ್ಲಿ ಬಸವನೆ ಬ್ರಾಹ್ಮಣನಾದ; ಜಂಗಮನೆ ಲೋಕೇಶ್ವರನೆಂಬ ಲಿಂಗ. ದ್ವಾರಪರಯುಗದಲ್ಲಿ ಬಸವನೆ ಶ್ರೀಧರಪಂಡಿತನಾದ; ಜಂಗಮವೆ ಶ್ರೀಶೈಲ ಮಲ್ಲಿಕಾರ್ಜುನನಾದ. ಕಲಿಯುಗದಲ್ಲಿ ಕರುಣಿ ಬಸವನೆಂಬ ವೃಷಭ, ಜಂಗಮವೆ ಗೊಹೇಶ್ವರ. ಪ್ರಾಳಿಯೆಂಬ ಯುಗದಲ್ಲಿ ಬಸವನೆ ಭೃಂಗೀಶ್ವರ; ಜಂಗಮವೆ ಸದಾಶಿವ. ಅರ್ಭೂತನೆಂಬ ಯುಗದಲ್ಲಿ ಬಸವನೆ ರಾಮಚಂದ್ರ: ಜಂಗಮವೆ ಅನಾದಿಲಿಂಗ. ತಮಂಧನೆಂಬ ಯುಗದಲ್ಲಿ ಬಸವನೆ ಕಾಲರುದ್ರ; ಜಂಗಮವೆ ಊರ್ಧ್ವಪೀಠೇಶ್ವರ. ತಂಡಜನೆಂಬ ಯುಗದಲ್ಲಿ ಬಸವನೆ ಶಂಕರ; ಜಂಗಮವೆ ಸರ್ವೇಶ್ವರಲಿಂಗ. ಭಿನ್ನಜನೆಂಬ ಯುಗದಲ್ಲಿ ಬಸವನೆ ಪಶುಪತಿ; ಜಂಗಮವೆ ಮೂಕೇಶ್ವರಲಿಂಗ. ಇಂತೀ ಬಸವನೆಂಬ ರೂಪೇ ಭಕ್ತ. ಭಕ್ತನ ಮನದ ಕೊನೆಯ ಮೇಲೆ ಸೋಂಕಿ ಸುಳಿವಾತನೆ ಜಂಗಮ. ಇಂತೀ ಉಭಯವ ಏಕವಂ ಮಾಡುವ ನಂದಿನಿಯನಿದಿರಿಟ್ಟು ಪೂಜೆಯ ಮಾಡುವ ದ್ರೋಹಿಗಳಿಗೆ ನಾನೇನೆಂಬೆನಯ್ಯಾ ಗೊಹೇಶ್ವರಪ್ರಿಯ ನಿರಾಳಲಿಂಗಾ.