Index   ವಚನ - 16    Search  
 
ಆರುಲಿಂಗದಲ್ಲಿ ಅರತೆನೆಂಬ ಅರಿವುಗೇಡಿಗಳು ನೀವು ಕೇಳಿರೊ. ಆರುಲಿಂಗ ನಿಮಗೆಂತಪ್ಪವು ? ಆಚಾರಲಿಂಗ ಬ್ರಹ್ಮಂಗೆ ಸಂಬಂಧವಾಯಿತ್ತು. ಗುರುಲಿಂಗ ವಿಷ್ಣುವಿಂಗೆ ಸಂಬಂಧವಾಯಿತ್ತು. ಶಿವಲಿಂಗ ರುದ್ರಂಗೆ ಸಂಬಂಧವಾಯಿತ್ತು. ಜಂಗಮಲಿಂಗ ಈಶ್ವರಂಗೆ ಸಂಬಂಧವಾಯಿತ್ತು. ಪ್ರಸಾದಲಿಂಗ ಸದಾಶಿವಂಗೆ ಸಂಬಂಧವಾಯಿತ್ತು. ಮಹಾಲಿಂಗ ಪರಶಿವಂಗೆ ಸಂಬಂಧವಾಯಿತ್ತು. ಇಂತೀ ಆರು ದರುಶನಕ್ಕೆ ಸಂಬಂಧವಾಯಿತ್ತು. ನಿಮ್ಮ ಸಂಬಂಧವ ಬಲ್ಲರೆ ಹೇಳಿರೊ ? ಗುರುಲಿಂಗಜಂಗಮವೆಂಬ ತ್ರಿವಿಧಸಂಬಂಧ ; ಆರು ಪರಿಯ ಶಿಲೆಯ ಮೆಟ್ಟಿ ಮುಂಬಾಗಿಲವ ತೆರೆದು ಶ್ರೀಗುರುವಿನ ಪ್ರಸಾದವ ಸವಿದು ಮುಂದಿರ್ದ ಲಿಂಗಸಂಗದ ಅರ್ಪಿತ ದರುಶನವೆಂಬೊ ಜಂಗಮವ ನೋಡುತ್ತ ನೋಡುತ್ತ ನಿಬ್ಬೆರಗಾದರು ನೋಡಾ. ಆರನು ಮೀರಿ, ಮೂರನು ಮೆಟ್ಟಿ, ತಟ್ಟುಮುಟ್ಟುಗಳೆಂಬ ಭ್ರಮೆಗಳನೊಲ್ಲದೆ ಐವತ್ತೆರಡರೊಳಗಾಗಿ ಅರಿಯಲಾರದೆ ಮೀರಿಹೋದರು ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.