Index   ವಚನ - 26    Search  
 
ಗುರುಲಿಂಗಜಂಗಮದ ತ್ರಿವಿಧಭಕ್ತನೆನಿಸಿಕೊಂಬ ಅಣ್ಣಗಳು ನೀವು ಕೇಳಿರೋ. ಸ್ಥೂಲ ಸೂಕ್ಷ್ಮ ಕಾರಣವೆಂಬ ತ್ರಿವಿಧವ ತಿಳಿಯಬಲ್ಲರೆ ತ್ರಿವಿಧಭಕ್ತನೆಂದೆನಿಸಬಹುದು. ಸ್ಥೂಲ ಸೂಕ್ಷ್ಮ ಕಾರಣದಲ್ಲಿ ದಶವಾಯುಗಳುಂಟು. ಅಲ್ಲಿದ್ದ ತ್ರಿವಿಧಪತಿಗಳಿಗೆ ನಾಲ್ಕು ಮುಖಗಳುಂಟು. ಉತ್ತರ ದಕ್ಷಿಣ ಪೂರ್ವ ಪಶ್ವಿಮವುಂಟು. ಪವನ ನಾಲ್ಕು ಮೂಲವುಂಟು. ಅಲ್ಲಿ ಸಕಲ ಆಚಾರ್ಯರ ಕ್ರೀಯ ಸಂಬಂಧವುಂಟು ಇಂತೀ ಸ್ಥಳದಲ್ಲಿ ಸಂಬಂಧವನರಿಯಬಲ್ಲರೆ [ಸ್ಥೂಲ]ಭಕ್ತನೆಂದೆನಿಸಬಹುದು. ನಿಷ್ಠೆ ನಿಜ ಸತ್ಯ ಸದಾಚಾರ ಸದ್ಭಾವ ಜೀವನವಿದ್ದ ಬಿಡಾರವ ನೋಡಿ : ಅಲ್ಲಿದ್ದ ಅಧಿಪತಿಗೆ ಮುಖವುಂಟು. ಸಕಲ ವೈಪತಿಗಳ ಮರದು ಜಂಗಮಲಿಂಗವ ನಿರೀಕ್ಷಣವ ಮಾಡಬಲ್ಲರೆ ಸೂಕ್ಷ್ಮ ಶರಣನೆಂದೆನಿಸಬಹುದು. ಪುರದ ಜನರುಗಳೆಲ್ಲರನು ಮೈಮರೆಸಿ ನಿರ್ಭವಿಗಳಂ ಮಾಡಿ ಕೆಡಹಿ, ಚಿತ್ರಮಂಟಪದ ಬಾಗಿಲೊಳು ಹೊಕ್ಕು ಎರಡು ಮುಖದ ಅಧಿಪತಿಯ ನಿರೀಕ್ಷಣವಂ ಮಾಡಿ ಆದಿಪುರದ ಸುಖಂಗಳ ಹಿಂದುಗಳೆದು ಬಾರದ ಬಟ್ಟೆಯಂ ಮೆಟ್ಟಿ, ಸೋಸದ ಜಲವ ಕೊಳಬಲ್ಲಡೆ ಕಾರಣೈಕ್ಯನೆಂದೆನಿಸಬಹುದು. ಇದನರಿಯದೆ ಸ್ಥೂಲ ಸೂಕ್ಷ್ಮ ಕಾರಣವೆಂದು ನುಡಿವ ಮರವಿಯ ಮರಳುಗಳ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.