Index   ವಚನ - 29    Search  
 
ಕವಿಗಳ ತರ್ಕದ ಪ್ರಸ್ತಾವದ ವಚನ : ಪಾದ ಪ್ರಾಸ ಗಣವ ಬಲ್ಲೆನೆಂಬ ಅಣ್ಣಗಳು ನೀವು ಕೇಳಿರೊ. ತನ್ನಂಗಪಥದಲ್ಲಿದ್ದ ಪೃಥ್ವಿಯ ಮೂಲವನಳಿದು ಆ ನಾಗಲೋಕದ ಸರ್ಪನ ಎಬ್ಬಿಸಿ, ಆಕಾಶಮೂಲಕ್ಕೆ ನಡೆಸಬಲ್ಲಡೆ ಆತ ಪಾದಕಾರುಣ್ಯವ ಬಲ್ಲನೆಂದೆನಿಸಬಹುದು. ಅಷ್ಟದಳಕಮಲದ ಹುಗುಲ ಹಿಡಿದು ಮೆಟ್ಟಿ ಒಂಬತ್ತು ಪರಿಯಲ್ಲಿ ಸುತ್ತಿ ಆಡುವ ಅಗ್ರವ ನಿಲ್ಲಿಸಿ, ನಾಲ್ಕು ಮುಖದ ಬಿರಡದಲ್ಲಿ ಸಿಂಹಾಸನವನಿಕ್ಕಿದ ಮಹಾರಾಯನ ನಿರೀಕ್ಷಣವ ಮಾಡಬಲ್ಲರೆ ಆತ ಪ್ರಾಸವ ಬಲ್ಲವನೆಂದೆನಿಸಬಹುದು. ಹತ್ತುಮುಖದಲ್ಲಿ ಹರಿದಾಡುವ ವಾಯುವ ಏಕವ ಮಾಡಬಲ್ಲರೆ, ಮೂರು ಪವನವೊಂದರೊಳು ಕೂಡಿ ಪಂಚದ್ವಾರದಲ್ಲಿ ತುಂಬಿ ಮೇಲ್ಗಿರಿಗೆ ನಡಸಿ ಪರಮಾಮೃತದ ಹೊಳೆಯ ನಿಲ್ಲಿಸಬಲ್ಲರೆ ಆತ ಗಣವ ಬಲ್ಲವನೆಂದೆನಿಸಬಹುದು. ಇದನರಿಯದೆ ಛಂದ ನಿಘಂಟು ಅಸಿ ವ್ಯಾಕರಣಂಗಳು ಪಂಚಮಹಾಕಾವ್ಯಂಗಳುಯೆಂಬ ಮಡಕಿಯ ಅಟ್ಟುಂಡ ಹಂಚಮಾಡಿ ಬಿಟ್ಟುಹೋಹುದನರಿಯದೆ ಆ ಹಂಚನೆ ಹಿಡಿದು ಕವಿಯೆಂದು ತಿರಿದುಂಬ ದೀಕ್ಷವಿಲ್ಲದ ತಿರುಕರಿಗೆ ಕವಿಗಳೆನುವವರ ಕಂಡು ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.