Index   ವಚನ - 5    Search  
 
ಪ್ರಸಾದವೆಂಬುದು ನಿರ್ಮಳಮುಖದಿಂದ ಉದ್ಭವವಾದದ್ದು. ಚಿತ್‍ಶಕ್ತಿಯಿಂದ ಮಹಾಲಿಂಗರೂಪವಾಯಿತು. ಮಹಾಲಿಂಗಪ್ರಸಾದದಿಂದ ಪ್ರಸಾದಲಿಂಗ ಉದ್ಭವವಾಯಿತು. ಪ್ರಸಾದಲಿಂಗದಿಂದ ಜಂಗಮಲಿಂಗ ಉದ್ಭವವಾಯಿತು. ಜಂಗಮಲಿಂಗಪ್ರಸಾದದಿಂದ ಶಿವಲಿಂಗ ಉದ್ಭವವಾಯಿತು. ಶಿವಲಿಂಗಪ್ರಸಾದದಿಂದ ಗುರುಲಿಂಗಪ್ರಸಾದ ಉದ್ಭವವಾಯಿತು. ಗುರುಲಿಂಗಪ್ರಸಾದದಿಂದ ಅಚಾರಲಿಂಗ ಉದ್ಭವವಾಯಿತು. ಇಂತೀ ಷಡ್ವಿಧಲಿಂಗವು ಪ್ರಸಾದದಿಂದ ಉದ್ಭವಿಸಿದವು. ಲಿಂಗದಿಂದ ಜಗತ್ತು ಉದ್ಭವಿಸಿದವು. 'ಲಿಂಗಮಧ್ಯೇ ಜಗತ್ಸರ್ವಂ ತ್ರೆೃಲೋಕ್ಯಂ ಸಚರಾಚರಂ | ಲಿಂಗ ಬಾಹ್ಯಾತ್ ಪರಂ ನಾಸ್ತಿ [ತಸ್ಮಾತ್] ಲಿಂಗಂ ಪ್ರಪೂಜಯೇತ್ || ಲೀಯಾಲೀಯ ಸಂಪ್ರೋಕ್ತಂ ಸಕಾರಂ ಸ್ಫಟಿಕಮುಚ್ಯತೇ ! ಲಯರ್ನಾಗಮಶ್ಯನಂ ಲಿಂಗಶಬ್ದಮೇವಚೇತ್ || ಲೀಯತೇ ಗಮ್ಯತೇ ಯತ್ರ ಯೋನಿಃ ಸರ್ವಚರಾಚರಂ | ತದೀಯಂ ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ ||'' ಸರ್ವ ಸಚರಾಚರವೇ ಪ್ರಸಾದರೂಪ. ಅನಂತಕೋಟಿ ಬ್ರಹ್ಮಾಂಡಗಳಿಗೆ ಪ್ರಸಾದವೆ ಕಾಯ ಜೀವ ಪ್ರಾಣವಾಯಿತು, ಕಾಯ ಇಷ್ಟಲಿಂಗವಾಯಿತು, ಜೀವ ಪ್ರಾಣಲಿಂಗವಾಯಿತು, ಭಾವವೇ ತೃಪ್ತಿಲಿಂಗವಾಯಿತು. ಪೃಥ್ವಿ ಅಪ್ಪುಗಳೆರಡು ಕಾಯವಾಯಿತು. ಅಗ್ನಿ ವಾಯುಗಳೆರಡು ಪ್ರಾಣಲಿಂಗವಾಯಿತು. ಅಕಾರ ಓಂಕಾರವೇ ಭಾವವಾಯಿತು. ಇಂತೀ ಪಂಚತತ್ವಪ್ರಸಾದವೆನಿಸಿದ ಪ್ರಣಮವು [ಹೀಗೆ ಕಾಯ ಜೀವ ಪ್ರಾಣ ಪ್ರಸಾದವಾಯಿತ್ತು] ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.