ಶಿವಲಿಂಗಾಂಗಿ ಲಿಂಗಪ್ರೇಮಿ ನಡೆಲಿಂಗ ನುಡಿಲಿಂಗ
ಮುಖಲಿಂಗ ಭಾವಲಿಂಗ ಸರ್ವಾಂಗಲಿಂಗ ಚೈತನ್ಯಾತ್ಮಕ
ಶರಣನನರಿಯದೆ ವೇಷಧಾರಿಗಳು ನುಡಿವರು.
ಲಿಂಗ ಬೇರೆ ಅಂಗ ಬೇರೆ ಇಂತೆಂದು ನುಡಿವ ಚಾರ್ವಾಕರ
ಅಂಗದ ಮೇಲೆ ಹೊಂದಿದ ಲಿಂಗವೆಲ್ಲ ಶಿಲೆಯು.
ಅವನು ನುಡಿಯುವ ಮಾತು ಹೆಂಡ ಕುಡಿವವರ ಬೊಗಳಾಟ.
ಅವರು ಕೊಂಬುವುದೆಲ್ಲ ಅಶುದ್ಧವಲ್ಲದೆ ಪ್ರಸಾದವಲ್ಲ.
ಅವರು ವಿಭೂತಿ ರುದ್ರಾಕ್ಷಿ ಲಿಂಗವ ಧರಿಸಿದರೇನು
ಯಮದರ್ಶನ ಚೋರದರ್ಶನ.
ಲಿಂಗಾಂಗಿ ಲಿಂಗಪ್ರಾಣಿಗಳ ನಿಂದಿಸುವ ವೇಷಧಾರಿಗಳು
ಜಂಗಮವೆಂದು ಪೂಜಿಸುವ ಭಕ್ತಂಗೆ ಎಕ್ಕಲಜನ್ಮ ಬಿಡದೆಂದ
ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.