Index   ವಚನ - 33    Search  
 
ಪ್ರಸಾದ ಪ್ರಸಾದವೆಂದು ಒಪ್ಪಕ್ಕೆ ಕೊಂಬ ಬೊಪ್ಪಗಳು ನೀವು ಕೇಳಿರೊ. ಕಾಯಪ್ರಸಾದವನರಿದು, ಕರಣಪ್ರಸಾದವನರಿದು, ಜೀವಪ್ರಸಾದವನರಿದು, ನಿಜಪ್ರಸಾದವನರಿದು ಕೊಳಬಲ್ಲರೆ ಪ್ರಸಾದಿ. ಕೊಂಬವರ ಕಂಡು ಪ್ರಸಾದವ ಕೈಕೊಂಡರೆ ಕಂಡವರ ಕಂಡು ಕೌದಿಯ ಹೊಲಿಯ ಹೋದರೆ ಕುಂಟೆಳೆ ಬಿದ್ದಂತೆ. ನವಿಲು ಕುಣಿಯಿತ್ತೆಂದು ಶಾಬಕ ಕುಣಿದು ಪುಚ್ಚವ ಕಳಕೊಂಡಂತೆ. ಸಿಂಹ ಲೆಂಘಣಿಸಿತ್ತೆಂದು ಸೀಳನಾಯಿ [ಲೆಂಘಣಿಸಿ] ಸೊಂಟವ ಕಳಕೊಂಡಂತೆ. ಸದ್ಭಕ್ತರ ಕಂಡು ನಾನು ಸದ್ಭಕ್ತನೆಂದು ಓಗರವ ನೀಡಿಸಿಕೊಂಡು ಅಯ್ಯಾ, ಹಸಾದ, ಮಹಾಪ್ರಸಾದವ ಪಾಲಿಸಿರೆಂದು ತನ್ನಾದಿ ಕ್ರಿಯಾದೀಕ್ಷೆ, ತನ್ನ ಮಧ್ಯೆ ಜ್ಞಾನದೀಕ್ಷೆ, ತನ್ನವಸಾನ ಮಹಾಜ್ಞಾನ ದೀಕ್ಷೆಯ ತಿಳಿಯದೆ ತನ್ನ ಪೂರ್ವಾಪರ, ತನ್ನ ಉದಯಾಸ್ತಮಾನವರಿಯದೆ, ಅರ್ಪಿತಾವಧಾನಭಕ್ತಿಯನರಿಯದೆ, ಗುರು ಲಿಂಗ ಜಂಗಮದ ನಿಲುಕಡೆಯನರಿಯದೆ, ಕಾಂಚನವ ಕೊಟ್ಟು, ಕೈಯಾಂತು ಪಡಕೊಂಬ ಭಕ್ತನ ಅಂಗವಿಕಾರವು ಮುನ್ನಿನಂತೆ. ಆ ಭಕ್ತನ ಆಚಾರ ವಿಚಾರ ನಡೆ ನುಡಿ ದೀಕ್ಷಾತ್ರಯಂಗಳ ವಿಚಾರಿಸದೆ ಪ್ರಸಾದವ ಕೊಟ್ಟ ಗುರುವಿನ ವಿಚಾರವು ಮುನ್ನಿನಂತೆ. ಈ ಉಭಯತರು, ಬಟ್ಟೆಗುರುಡನ ಕೈಯ ಬಟ್ಟೆಗುರುಡ ಹಿಡಿದು ಹಳ್ಳವ ಬಿದ್ದಂತೆ ಕಾಣಾ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.