ವಚನ - 911     
 
ಆರು ಚಕ್ರದಲ್ಲಿ ಅರಿದಿಹೆನೆಂಬ ಅಜ್ಞಾನ ಜಡರುಗಳು ನೀವು ಕೇಳಿರೊ! ಅದೆಂತೆಂದಡೆ: ಆಧಾರಚಕ್ರ ಪೃಥ್ವಿ ಸಂಬಂಧ, ಅಲ್ಲಿಗೆ ಬ್ರಹ್ಮನಧಿದೇವತೆ, ಆಚಾರ ಲಿಂಗವ ಪಿಡಿದು ಯೋಗಿಯಾಗಿ ಸುಳಿದ! ಸ್ವಾದಿಷ್ಟಾನ ಚಕ್ರ ಅಪ್ಪುವಿನ ಸಂಬಂಧ, ಅಲ್ಲಿಗೆ ವಿಷ್ಣು ಅಧಿದೇವತೆ, ಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ! ಮಣಿಪೂರಕಚಕ್ರ ಅಗ್ನಿಯ ಸಂಬಂಧ, ಅಲ್ಲಿಗೆ ರುದ್ರನಧಿದೇವತೆ, ಶಿವಲಿಂಗವ ಪಿಡಿದು ಶ್ರವಣನಾಗಿ ಸುಳಿದ! ಅನಾಹತಚಕ್ರ ವಾಯು ಸಂಬಂಧ, ಅಲ್ಲಿಗೆ ಈಶ್ವರನಧಿದೇವತೆ, ಜಂಗಮಲಿಂಗವ ಪಿಡಿದು ಸನ್ಯಾಸಿಯಾಗಿ ಸುಳಿದ! ವಿಶುದ್ಧಿಚಕ್ರ ಆಕಾಶ ಸಂಬಂಧ, ಅಲ್ಲಿಗೆ ಸದಾಶಿವನಧಿದೇವತೆ, ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ! ಆಜ್ಞಾಚಕ್ರ ಪರತತ್ತ್ವ ಸಂಬಂಧ ಅಲ್ಲಿಗೆ ಪರಶಿವನಧಿದೇವತೆ, ಮಹಾಲಿಂಗವ ಪಿಡಿದು ಪಾಶುಪತಿಯಾಗಿ ಸುಳಿದ! ಇಂತೀ ಆರುದರುಶನಂಗಳು ಬಂದಡೆ ಅಂಗಳವ ಹೋಗಲೀಸಿರಿ! ಆ ಲಿಂಗ ನಿಮಗೆಂತಪ್ಪವು? ಇದು ಕಾರಣ, ಮುಂದಿರ್ದ ಗುರುಲಿಂಗಜಂಗಮದ ತ್ರಿವಿಧ ಸಂಬಂಧವನರಿಯದೆ ಷಟ್ಸ್ಥಲದಲ್ಲಿ ತೃಪ್ತರಾದೆವೆಂಬ ಭ್ರಷ್ಟರ ನೋಡಾ ಗುಹೇಶ್ವರಾ!