Index   ವಚನ - 48    Search  
 
ವೇದವ ನೋಡುವಣ್ಣಗಳ ವಾದಿಸಿತ್ತು ಮಾಯೆ. ಶಾಸ್ತ್ರವ ನೋಡುವಣ್ಣಗಳ ಗತಿಗೆಡಿಸಿತ್ತು ಮಾಯೆ. ಆಗಮ ನೋಡುವಣ್ಣಗಳ ಮರುಳಮಾಡಿತ್ತು ಮಾಯೆ. ಪುರಾಣವ ನೋಡುವಣ್ಣಗಳ ಭ್ರಮಿತರ ಮಾಡಿತ್ತು ಮಾಯೆ. ಜ್ಯೋತಿಷ್ಯವ ನೋಡುವಣ್ಣಗಳ ಆಶ್ಚರ್ಯವ ಮಾಡಿತ್ತು ಮಾಯೆ. ಹರಹರಾ ಶಿವಶಿವಾ ಮಾಯೆ ಇದ್ದೆಡೆಯ ನೋಡಾ! ಬ್ರಹ್ಮ ವಿಷ್ಣು ರುದ್ರಾದಿಗಳು ದೇವ ದಾನವ ಮಾನವರು ಗಂಗೆವಾಲುಕರು ಭೃಂಗಿಪ್ರಿಯರು ಪಂಚಮುಖರು ಚತುರ್ಮುಖರು ಏಕಾದಶರುದ್ರರು ಎಂಬತ್ತೆಂಟುಕೋಟಿ ಋಷೀಶ್ವರರು ನವಕೋಟಿಬ್ರಹ್ಮರು ಮಾಯಾಬಲೆಗೆ ಸಿಲ್ಕಿದರು ನೋಡಾ | ಹರಹರಾ ಶಿವಶಿವಾ ಇದು ಕಾರಣ ನಿಮ್ಮ ಪ್ರಮಥರು ಆ ಮಾಯೆವಿಡಿದು ತಿಂದು ತೇಗಿದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.