Index   ವಚನ - 87    Search  
 
ಆದಿಯ ಸಂಗದಿಂದ ಆದವನಲ್ಲ, ಅನಾದಿಯ ಸಂಗದಿಂದ ಆದವನಲ್ಲ, ಆದಿ ಅನಾದಿಯನೊಳಗೊಂಡು ತಾನು ತಾನಾಗಿರ್ದನಯ್ಯ ಆ ಶರಣನು. ಆಧಾರವಿಡಿದು ಭಕ್ತನಾಗಿ, ಆಚಾರಲಿಂಗವ ನೆಲೆಯಂಗೊಂಡುದೆ ಆಚಾರಲಿಂಗವೆಂಬೆನಯ್ಯ. ಸ್ವಾಧಿಷ್ಠಾನವಿಡಿದು ಮಹೇಶ್ವರನಾಗಿ ಗುರುಲಿಂಗವ ನೆಲೆಯಂಗೊಂಡುದೆ ಶಿವಲಿಂಗವೆಂಬೆನಯ್ಯ. ಮಣಿಪೂರಕವಿಡಿದು ಪ್ರಸಾದಿಯಾಗಿ ಶಿವಲಿಂಗವ ನೆಲೆಯಂಗೊಂಡುದೆ ಶಿವಲಿಂಗವೆಂಬೆನಯ್ಯ. ಅನಾಹತವಿಡಿದು ಪ್ರಾಣಲಿಂಗಿಯಾಗಿ ಜಂಗಮಲಿಂಗವ ನೆಲೆಯಂಗೊಂಡುದೆ ಜಂಗಮಲಿಂಗವೆಂಬೆನಯ್ಯ. ವಿಶುದ್ಧಿವಿಡಿದು ಶರಣನಾಗಿ ಪ್ರಸಾದಲಿಂಗವ ನೆಲೆಯಂಗೊಂಡುದೆ ಪ್ರಸಾದಲಿಂಗವೆಂಬೆನಯ್ಯ. ಆಜ್ಞೇಯವಿಡಿದು ಐಕ್ಯನಾಗಿ ಮಹಾಲಿಂಗವ ನೆಲೆಯಂಗೊಂಡುದೆ ಮಹಾಲಿಂಗವೆಂಬೆನಯ್ಯ. ಬ್ರಹ್ಮರಂಧ್ರವಿಡಿದು ಮಹಾಜ್ಞಾನಿಯಾಗಿ ಚಿಲ್ಲಿಂಗವ ನೆಲೆಯಂಗೊಂಡುದೆ ಚಿಲ್ಲಿಂಗವೆಂಬೆನಯ್ಯ. ಶಿಖಾವಿಡಿದು ಸ್ವಯಜ್ಞಾನಿಯಾಗಿ ಚಿದಾನಂದಲಿಂಗವ ನೆಲೆಯಂಗೊಂಡುದೆ ಚಿದಾನಂದಲಿಂಗವೆಂಬೆನಯ್ಯ. ಪಶ್ಚಿಮವಿಡಿದು ನಿರಂಜನನಾಗಿ ಚಿನ್ಮಯಲಿಂಗವ ನೆಲೆಯಂಗೊಂಡುದೆ ಚಿನ್ಮಯಲಿಂಗವೆಂಬೆನಯ್ಯ. ಅಣುಚಕ್ರವಿಡಿದು ಪರಿಪೂರ್ಣನಾಗಿ ಓಂಕಾರಲಿಂಗವ ನೆಲೆಯಂಗೊಂಡುದೆ ಓಂಕಾರಲಿಂಗವೆಂಬೆನಯ್ಯ. ನಿಷ್ಪತಿವಿಡಿದು ನಿಃಕಲನಾಗಿ ನಿರವಯಲಿಂಗವ ನೆಲೆಯಂಗೊಂಡುದೆ ನಿರವಯಲಿಂಗವೆಂದೆಂಬೆನಯ್ಯ. ಇಂತಪ್ಪ ಸುಖವ ನಿಮ್ಮಮಹಾಶರಣರೆ ಬಲ್ಲರಲ್ಲದೆ ಉಳಿದಾದವರು ಇವರೆತ್ತ ಬಲ್ಲರಯ್ಯ, ಝೇಂಕಾರ ನಿಜಲಿಂಗಪ್ರಭುವೆ.