Index   ವಚನ - 102    Search  
 
ಆಕಾರನಿರಾಕಾರವಿಲ್ಲದಂದು, ಋತುವಡಗಿದ ಲಿಂಗವು, ನೆನವಂ ಬೆರೆಸಲು ಝೇಂಕಾರ ಪುಟ್ಟಿತ್ತು. ಆ ನೆನವೆ ಆತ್ಮನಂ ಬೆರೆಸಲು ಆಕಾಶ ಪುಟ್ಟಿತ್ತು. ಆ ನೆನವೆ ಮನವಂ ಬೆರೆಸಲು ವಾಯು ಪುಟ್ಟಿತ್ತು. ಆ ನೆನವೆ ಬುದ್ಧಿಯಂ ಬೆರೆಸಲು ತೇಜ ಪುಟ್ಟಿತ್ತು. ಆ ನೆನವೆ ಚಿತ್ತವಂ ಬೆರೆಸಲು ಅಪ್ಪು ಪುಟ್ಟಿತ್ತು. ಆ ನೆನವೆ ಅಹಂಕಾರವ ಬೆರೆಸಲು ಪೃಥ್ವಿ ಪುಟ್ಟಿತ್ತು. ಆ ಅಹಂಕಾರವೇ ನಿವೃತ್ತಿ ಎನಿಸಿತ್ತು, ಚಿತ್ತವೆ ಪ್ರತಿಷ್ಠೆ ಎನಿಸಿತ್ತು, ಬುದ್ಧಿಯೇ ವಿದ್ಯೆಯೆನಿಸಿತ್ತು, ಮನವೇ ಶಾಂತಿಯೆನಿಸಿತ್ತು, ಆತ್ಮವೇ ಶಾಂತ್ಯತೀತವೆನಿಸಿತ್ತು. ಶಬ್ದದಲ್ಲಿ ಶರಣನಾದ, ಸ್ಪರುಶನದಲ್ಲಿ ಪ್ರಾಣಲಿಂಗಿಯಾದ, ರೂಪಿನಲ್ಲಿ ಪ್ರಸಾದಿಯಾದ, ರಸದಲ್ಲಿ ಮಹೇಶ್ವರನಾದ, ಗಂಧದಲ್ಲಿ ಭಕ್ತನಾದ-ಇದು ಅಂಗಸಂಬಂಧ. ಇನ್ನು ಇದಕ್ಕೆ ಲಿಂಗಸಂಬಂಧವು : ಶ್ರೋತ್ರದಲ್ಲಿ ಪ್ರಸಾದಲಿಂಗ, ತ್ವಕ್ಕಿನಲ್ಲಿ ಜಂಗಲಿಂಗ, ನೇತ್ರದಲ್ಲಿ ಶಿವಲಿಂಗ, ಜಿಹ್ವೆಯಲ್ಲಿ ಗುರುಲಿಂಗ, ಘ್ರಾಣದಲ್ಲಿ ಆಚಾರಲಿಂಗ. ಇಂತಪ್ಪ ಶರಣನು ಅಂಗಲಿಂಗಸಂಬಂಧವನೊಳಕೊಂಡು, ಚಿತ್ತ ಆಶ್ರಯದೊಳು ಕೂಡಿ ನಿಃಪ್ರಿಯವೆನಿಸಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.