ಸರ್ವಮಯವ ಗರ್ಭೀಕರಿಸಿಕೊಂಡಿರ್ದ ಲಿಂಗವ
ನೋಡಹೋಗದ ಮುನ್ನ ಅದು ಎನ್ನನೊಳಕೊಂಡಿತ್ತು ನೋಡಾ!
ಅದಕ್ಕೆ ಪಾದ ಒಂದು, ಹಸ್ತ ಮೂರು, ಅಂಗವಾರು,
ಮೂವತ್ತಾರು ತಲೆಯು, ಐವತ್ತೆರಡು ನಾಲಗೆಯು,
ಒಂಬತ್ತು ಬಾಗಿಲ ದೇಗುಲದೊಳಗೆ ಇಪ್ಪ ಲಿಂಗವನು
ಮನೋಹರನೆಂಬ ಪೂಜಾರಿಯು,
ನವರತ್ನವೆಂಬ ತೊಂಡಲಂಗಳ ಕಟ್ಟಿ
ಗೋಪ್ಯದಿಂದ ಲಿಂಗಾರ್ಚನೆಯಂ ಮಾಡಿ,
ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ,
ನಿರ್ಮಲವೆಂಬ ಗಂಧವನೊರೆದು,
ಸುಜ್ಞಾನವೆಂಬ ಅಕ್ಷತೆಯನಿಟ್ಟು,
ನಿರ್ಭಾವವೆಂಬ ಪತ್ರಿಯನೇರಿಸಿ,
ನಿರ್ದ್ವಂದವೆಂಬ ಧೂಪವ ತೋರೆ,
ಆ ಮನೋಹರನೆಂಬ ಪೂಜಾರಿಯ
ನಿರ್ವಯಲ ನುಂಗಿತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sarvamayava garbhīkarisikoṇḍirda liṅgava
nōḍahōgada munna adu ennanoḷakoṇḍittu nōḍā!
Adakke pāda ondu, hasta mūru, aṅgavāru,
mūvattāru taleyu, aivatteraḍu nālageyu,
ombattu bāgila dēguladoḷage ippa liṅgavanu
manōharanemba pūjāriyu,
navaratnavemba toṇḍalaṅgaḷa kaṭṭi
gōpyadinda liṅgārcaneyaṁ māḍi,
antaraṅgada beḷagina mahācidvibhūtiyaṁ dharisi,
nirmalavemba gandhavanoredu,
sujñānavemba akṣateyaniṭṭu,
nirbhāvavemba patriyanērisi,
nirdvandavemba dhūpava tōre,
ā manōharanemba pūjāriya
nirvayala nuṅgitu nōḍā
jhēṅkāra nijaliṅgaprabhuve.