ಆದಿಯಲ್ಲಿ ಪರಬ್ರಹ್ಮವೆಂಬ ಮೂರ್ತಿಯು
ಪಾತಾಳಲೋಕಕ್ಕೆ ಬಂದು
ನರಮುನೀಶ್ವರನ ಭಕ್ತನಂ ಮಾಡಿ
ಆತನ ಕರಸ್ಥಲಕ್ಕೆ ಆಚಾರಲಿಂಗವ ಕೊಟ್ಟನಯ್ಯ.
ಆ ಪರಬ್ರಹ್ಮವೆಂಬ ಮೂರ್ತಿಯು ಮರ್ತ್ಯಲೋಕಕ್ಕೆ ಬಂದು
ಸುರಮುನೀಶ್ವರನ ಮಹೇಶ್ವರನಂ ಮಾಡಿ
ಆತನ ಕರಸ್ಥಲಕ್ಕೆ ಗುರುಲಿಂಗವ ಕೊಟ್ಟನಯ್ಯ.
ಆ ಪರಬ್ರಹ್ಮವೆಂಬ ಮೂರ್ತಿಯು ಸ್ವರ್ಗಲೋಕಕ್ಕೆ ಬಂದು
ದೇವಮುನೀಶ್ವರನ ಪ್ರಸಾದಿಯಂ ಮಾಡಿ
ಆತನ ಕರಸ್ಥಲಕ್ಕೆ ಶಿವಲಿಂಗವ ಕೊಟ್ಟನಯ್ಯ.
ಆ ಪರಬ್ರಹ್ಮವೆಂಬ ಮೂರ್ತಿಯು ತತ್ಪುರುಷಲೋಕಕ್ಕೆ ಬಂದು ಮನುಮುನೀಶ್ವರನ ಪ್ರಾಣಲಿಂಗಿಯ ಮಾಡಿ
ಆತನ ಕರಸ್ಥಲಕ್ಕೆ ಜಂಗಮಲಿಂಗವ ಕೊಟ್ಟನಯ್ಯ.
ಆ ಪರಬ್ರಹ್ಮವೆಂಬ ಮೂರ್ತಿಯು ಈಶಾನ್ಯಲೋಕಕ್ಕೆ ಬಂದು
ಆತ್ಮಮುನೀಶ್ವರನ ಶರಣನಂ ಮಾಡಿ
ಆತನ ಕರಸ್ಥಲಕ್ಕೆ ಪ್ರಸಾದಲಿಂಗವ ಕೊಟ್ಟನಯ್ಯ.
ಆ ಪರಬ್ರಹ್ಮವೆಂಬ ಮೂರ್ತಿಯು ಅಂಬರಲೋಕಕ್ಕೆ ಬಂದು ಮಹಾಮುನೀಶ್ವರನ ಐಕ್ಯನಂ ಮಾಡಿ
ಆತನ ಕರಸ್ಥಲಕ್ಕೆ ಮಹಾಲಿಂಗವ ಕೊಟ್ಟನಯ್ಯ.
ಇಂತಪ್ಪ ಆ ಪರಬ್ರಹ್ಮವೆಂಬ ಮೂರ್ತಿಗೆ
ನಮೋ ನಮೋ ಎಂಬೆನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ.