Index   ವಚನ - 378    Search  
 
ಯೋಗೀಶ್ವರನಾದರೇನಯ್ಯ? ಅಹಂಕಾರವನಳಿದು, ನಿರಹಂಕಾರವನಾಚರಿಸಬೇಕಯ್ಯ. ಜೋಗಿವೇಷವ ತೊಟ್ಟಿದ್ದರೇನಯ್ಯ? ಸರ್ವಚಿಂತೆಯ ಬಿಟ್ಟು, ನಿಶ್ಚಿಂತವನಾಚರಿಸಬೇಕಯ್ಯ. ಪ್ರಣವಮತದಲ್ಲಿ ಇದ್ದರೇನಯ್ಯ? ವ್ಯಾಕುಳವನಳಿದು, ನಿರಾಕುಳವನಾಚರಿಸಬೇಕಯ್ಯ. ಸನ್ಯಾಸಿಮತದಲ್ಲಿ ಇದ್ದರೇನಯ್ಯ? ಆಸೆಯನಳಿದು, ನಿರಾಸೆಯನಾಚರಿಸಬೇಕಯ್ಯ. ಕಾಳಾಮುಖಮತದಲ್ಲಿದ್ದರೇನಯ್ಯ? ಭ್ರಾಂತಿಯನಳಿದು ನಿಭ್ರಾಂತಿಯನಾಚರಿಸಬೇಕಯ್ಯ. ಪಾಶುಪತಮತದಲ್ಲಿ ಇದ್ದರೇನಯ್ಯ? ಪರವನಳಿದು ಪರಕೆ ಪರವನಾಚರಿಸಬೇಕಯ್ಯ. ಶಿವಶರಣನಾದರೇನಯ್ಯ? ಸರ್ವಗುಣಾದಿಗಳನಳಿದು, ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ ಕರಸ್ಥಲದಲ್ಲಿ ಪರಬ್ರಹ್ಮವನಾಚರಿಸಬೇಕಯ್ಯ ಝೇಂಕಾರ ನಿಜಲಿಂಗಪ್ರಭುವೆ.