Index   ವಚನ - 477    Search  
 
ಮಾತು ಮಥನಂಗಳಿಲ್ಲದಂದು, ನೀತಿ ನಿರ್ಮಲವಿಲ್ಲದಂದು, ಜಾತಿಸೂತಕವಿಲ್ಲದಂದು, ನಾಮ-ರೂಪ-ಕ್ರಿಯೆಗಳಿಲ್ಲದಂದು, ಏನೇನೂ ಇಲ್ಲದಂದು, ತಾನೇ ನಿಷ್ಪತಿಯಾಗಿರ್ದನಯ್ಯ. ತನ್ನ ಚಿದ್ವಿಲಾಸದಿಂದ ಓಂಕಾರವೆಂಬ ಪ್ರಣವವಾಯಿತ್ತು ನೋಡಾ. ಆ ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರಂಗಳಾದವು. ಆ ಅಕಾರ ಉಕಾರ ಮಕಾರಂಗಳೊಡನೆ ನಾದ-ಬಿಂದು-ಕಲೆಗಳಾದವು. ಆ ನಾದ ಬಿಂದು ಕಲೆಗಳೊಡನೆ ಷಡಾಧಾರಚಕ್ರಂಗಳಾದವು. ಆ ಷಡಾಧಾರಚಕ್ರಂಗಳಲ್ಲಿ ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯರೆಂಬ ಷಡ್ವಿಧಮೂರ್ತಿಗಳಾದರು ನೋಡಾ. ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗವಾಗಿ, ನಿಶ್ಚಿಂತ ನಿರಾಕುಳ ನಿರ್ಭರಿತ ಲಿಂಗವ ಅರಿಯಬಲ್ಲಡೆ ಆತನೆ ಪ್ರಾಣಲಿಂಗಸಂಬಂಧಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.