Index   ವಚನ - 607    Search  
 
ಆದಿಯನರಿತು ಭಕ್ತನಾಗಿ, ಆಚಾರಲಿಂಗವ ನೆಲೆಗೊಂಡುದೆ ಸದ್ಭಕ್ತಿಯೆಂಬೆನಯ್ಯ. ಮಂತ್ರವನರಿತು ಮಹೇಶ್ವರನಾಗಿ, ಗುರುಲಿಂಗವ ನೆಲೆಯಂಗೊಂಡುದೆ ನೈಷ್ಠಿಕಭಕ್ತಿಯೆಂಬೆನಯ್ಯ. ಕ್ರೀಯವನರಿತು ಪ್ರಸಾದಿಯಾಗಿ, ಶಿವಲಿಂಗವ ನೆಲೆಯಂಗೊಂಡುದೆ ಸಾವಧಾನಭಕ್ತಿಯೆಂಬೆನಯ್ಯ. ಇಚ್ಫೆಯನರಿತು ಪ್ರಾಣಲಿಂಗಿಯಾಗಿ, ಜಂಗಮಲಿಂಗವ ನೆಲೆಯಂಗೊಂಡುದೆ ಅನುಭಾವಭಕ್ತಿಯೆಂಬೆನಯ್ಯ. ಜ್ಞಾನವನರಿತು ಶರಣನಾಗಿ, ಪ್ರಸಾದಲಿಂಗವ ನೆಲೆಯಂಗೊಂಡುದೆ ಅನುಪಮಭಕ್ತಿಯೆಂಬೆನಯ್ಯ. ಪರವನರಿತು ಐಕ್ಯನಾಗಿ, ಮಹಾಲಿಂಗವ ನೆಲೆಯಂಗೊಂಡುದೆ ಸಮರಸಭಕ್ತಿಯೆಂಬೆನಯ್ಯ. ಚಿತ್ತವನರಿತು ನಿಜಲಿಂಗವಾಗಿ, ಪರಬ್ರಹ್ಮವು ನೆಲೆಯಂಗೊಂಡುದೆ ನಿಷ್ಪತಿಭಕ್ತಿಯೆಂಬೆನಯ್ಯ. ಇದು ಕಾಣಾ, ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನ ಆಚರಣೆಯು.