Index   ವಚನ - 3    Search  
 
ಇನ್ನೂರ ಇಪ್ಪತ್ತನಾಲ್ಕು ಭುವನಂಗಳು, ಆ ಭುವನಾಧಿಪತಿಗಳ ಆ ಭುವನಗಣಂಗಳ ವಿಸ್ತೀರ್ಣವೆಂತೆಂದೊಡೆ: ಚತುರ್ದಶ ಭುವನಂಗಳ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಪರ್ವತಂಗಳ ಸಪ್ತಗೃಹರಾಶಿ ತಾರಾಪಥಂಗಳನು ಗರ್ಭೀಕರಿಸಿದ ಬ್ರಹ್ಮಾಂಡ; ಅಂಥ ಬ್ರಹ್ಮಾಂಡವ ಸಾವಿರದೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅನಾಶ್ರಿತವೆಂಬ ಭುವನ. ಆ ಭುವನದೊಳು ಅನಂಗೇಶ್ವರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐದುಕೋಟಿ ರುದ್ರ ಬ್ರಹ್ಮ ನಾರಾಯಣರು, ಐದುಕೋಟಿ ಇಂದ್ರ ಚಂದ್ರಾದಿತ್ಯರು, ಐದುಕೋಟಿ ವೇದಪುರುಷರು ಮುನೀಂದ್ರರು, ಮೂವತ್ನಾಲ್ಕುಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.