ಗುರು ಕರುಣವ ಹಡೆದುದಕ್ಕೆ ಚಿಹ್ನವಾವುದೆಂದಡೆ:
ಅಂಗದ ಮೇಲೆ ಲಿಂಗಸ್ವಾಯತವಾಗಿರಬೇಕು.
ಅಂಗದ ಮೇಲೆ ಲಿಂಗ ಸ್ವಾಯತವಿಲ್ಲದೆ
ಬರಿದೆ ಗುರುಕರಣವಾಯಿತ್ತೆಂದಡೆ ಅದೆಂತೊ?
ಲಿಂಗವಿಹೀನವಾಗಿ ಗುರುಕರುಣವುಂಟೆ? ಇಲ್ಲ.
ಆ ಮಾತ ಕೇಳಲಾಗದು.
ಇದು ಕಾರಣ, ಲಿಂಗಧಾರಣವುಳ್ಳುದೆ ಸದಾಚಾರ,
ಇಲ್ಲದಿರೆ, ಅನಾಚಾರವೆಂಬೆನಯ್ಯಾ ತೆಲುಗೇಶ್ವರಾ.