Index   ವಚನ - 43    Search  
 
ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ ಗುರೂಪದೇಶ ದೊರಕೊಂಡ ಪರಿಯೆಂತೋ? ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ ಲಿಂಗ ಸಂಬಂಧ ದೊರಕೊಂಡ ಪರಿಯೆಂತೋ? ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ, ಜಂಗಮ ಪ್ರಾಣಿಯಾದ ಪರಿಯೆಂತೋ? ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ, ಪಾದೋದಕ ಪ್ರಸಾದ ಸಂಬಂಧಿಯಾದ ಪರಿಯೆಂತೋ? ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ, ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಧಾರಣವಾದ ಪರಿಯೆಂತೋ? ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಪ್ರಣವಪಂಚಾಕ್ಷರಿ ಈ ಎಂಟು, ಶುದ್ಧ ಚಿದ್ರೂಪ ಪರಶಿವ ತಾನೇ ನೋಡಾ! ಆ ಪರಶಿವಬೀಜವೇ ಚಿತ್ತು. ಆ ಚಿತ್ತಿನ ಪ್ರಭೆಯಲ್ಲಿ ಶರಣನು ಉದಯಿಸಿದನು. ಇದು ಕಾರಣ, ಆದಿಯಲ್ಲಿ ಶಿವಬೀಜ ಶರಣನಾದ ಕಾರಣ ಶುದ್ಧ ನಿರ್ಮಲನು ನೋಡಾ ಶರಣನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.