Index   ವಚನ - 59    Search  
 
ಸ್ವಯಾಧೀನಮುಕ್ತನೆಂಬುವನೊಬ್ಬ; ಪರಾಧೀನಮುಕ್ತನೆಂಬುವನೊಬ್ಬ. ಕರ್ತೃಹೀನವಾಗಿ ಆತ್ಮನು ತನ್ನಿಂದ ತಾನೆ ಮುಕ್ತನೆಂಬುದು ಅದು ಅಜ್ಞಾನ ನೋಡಾ. ಆತ್ಮನು ಪಶುಪಾಶಬದ್ಧನು, ಅನಾದಿ ಮಲಯುಕ್ತನಾಗಿ, ಪಶುವಾಗಿ, ಆತ್ಮನೊಬ್ಬನುಂಟೆಂಬೆ. ಅನಾದಿಯಾಗಿ ಪಶುಪತಿಯಾಗಿ ನಿರ್ಮಲನಪ್ಪ ಶಿವನೊಬ್ಬನು ಬೇರುಂಟೆಂಬೆ. ಮಲ ಮಾಯಾ ಕರ್ಮವನುಂಡು ತೀರಿಸಿ ಶಿವನ ಪ್ರಸಾದದಿಂದ ಮುಕ್ತನೆಂಬೆ. ಆ ಮುಕ್ತಿಯಲ್ಲಿಯು ಪರಾಧೀನಮುಕ್ತನಲ್ಲದೆ ಏಕತ್ವವಿಲ್ಲ ಎಂಬೆ. ಏಕತ್ವವಿಲ್ಲದಾಗಳೆ ಮುಕ್ತಿಯೆಂಬುದು ಹುಸಿ. ಮಸಿಯೆಂದಾದರೂ ಬೆಳ್ಪಾದುದುಂಟೆ? ಅಂಬರ ಮಾಸಿದರೆ ತೊಳದಡೆ ಬೆಳ್ಳಹುದಲ್ಲದೆ, ಮಲದಲ್ಲಿ ಸೀರೆಯ ಮಾಡಿ ತೊಳೆದರೆ ಬಿಳಿದಾಗಬಲ್ಲುದೆ? ಇದು ಕಾರಣ, ದ್ವೈತಕ್ಕೆ ಎಂದೂ ಮುಕ್ತಿಯಿಲ್ಲಯೆಂಬೆ. ಇತರ ಮತಂಗಳಂತಿರಲಿ. ಪರಶಿವನ ಪರಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾದಳು. ಆ ಸುಜ್ಞಾನಶಕ್ತಿಯ ಗರ್ಭದಲ್ಲಿ ಶಿವಶರಣನುದಯವಾದ. ಅಂತುದಯವಾದ ಶರಣನು ಆ ಸುಜ್ಞಾನಶಕ್ತಿಯ ಸಂಗವ ಮಾಡಿ, ಆ ಸುಜ್ಞಾನಶಕ್ತಿಯೊಳಗೆ ತಾನೆಂಬ ಭಾವವ ಮರೆದು, ತಾನೆ ಪರಶಿವತತ್ವದೊಳಗೆ ದೀಪ ದೀಪವ ಬೆರಸಿದಂತೆ ರೂಪೆರಡಳಿದು ಏಕಾರ್ಥವಾಗಿ ನಿತ್ಯ ಮುಕ್ತನಾದ ನಿಜಲಿಂಗೈಕ್ಯನು ದ್ವೈತಿಯಲ್ಲ; ಅದ್ವೈತಿಯಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.