ಪಶು ಪಾಶ ಮಲ ಮಾಯಾಕರ್ಮಂಗಳು ನಿತ್ಯವೆಂಬೆ. ನಿತ್ಯವಾದಡೆ,
`ಪಶುಪಾಶವಿನಿರ್ಮುಕ್ತಃ ಪರಮಾತ್ಮಾ ಸದಾಶಿವಃ' ಎಂದುದಾಗಿ,
'ಇದಂ ಮಲತ್ರಯದೋಷಂ ಗುರುಣೈವ ವಿಮೋಚನಂ' ಎಂದುದಾಗಿ,
ಪಶು ಪಾಶ ಮಲ ಮಾಯಾಕರ್ಮಂಗಳು
ಗುರೂಪದೇಶದಿಂದಲೂ ಶಿವಪ್ರಸಾದತ್ವದಿಂದಲೂ ಕೆಡುತ್ತಿರ್ದಾವು.
ಪಶು ಪಾಶ ಮಲ ಮಾಯಾ ಕರ್ಮಂಗಳು
ಶಿವಯೋಗಿಗಳ ಮಧ್ಯದಲ್ಲಿಯೂ ಕೆಡುತ್ತಿರ್ದಾವು;
ಕೆಡುತ್ತಿರ್ದಂಥ ಅನಿತ್ಯವಾದ ವಸ್ತುವ,
ಅಭ್ರಚ್ಛಾಯವ ನಿತ್ಯವೆನ್ನಬಹುದೇ?
ನಿತ್ಯವೆಂಬೆಯಾದಡೆ, ಮಲಮಾಯಾಕರ್ಮಂಗಳು
ಎಂದೂ ತೊಲಗುವುದಿಲ್ಲ ಎನ್ನು.
ಮಲಮಾಯಾಕರ್ಮಂಗಳು ಎಂದೂ ತೊಲಗುವುದಿಲ್ಲ ಎಂಬಾಗವೇ
ಮುಕ್ತಿಯಿಲ್ಲಯೆನ್ನು. ಮುಕ್ತಿಯುಂಟಾದಡೆ,
ಮಲಮಾಯಾಕರ್ಮಂಗಳು ನಿತ್ಯವೆಂಬುದು ಅಬದ್ಧ.
ಅವು ನಿತ್ಯವಾದಾಗವೆ, ಉತ್ಪತ್ತಿ ಸ್ಥಿತಿ ಪ್ರಳಯಂಗಳಿಲ್ಲಾಯೆನ್ನು.
ಉತ್ಪತ್ತಿ ಸ್ಥಿತಿ ಪ್ರಳಯಂಗಳುಂಟಾದಲ್ಲಿ, ನಿತ್ಯವೆನಲಿಲ್ಲ.
ಪೃಥ್ವಿಯ ಲಯ ಅಪ್ಪುವಿನಲ್ಲಿ, ಅಪ್ಪುವಿನ ಲಯ ಅಗ್ನಿಯಲ್ಲಿ,
ಅಗ್ನಿಯ ಲಯ ವಾಯುವಿನಲ್ಲಿ, ವಾಯುವಿನ ಲಯ ಆಕಾಶದಲ್ಲಿ,
ಆಕಾಶದ ಲಯ ಆತ್ಮನಲ್ಲಿ, ಆತ್ಮನ ಲಯ ಮಹಾಲಿಂಗದಲ್ಲಿ.
ಇಂತಿವೆಲ್ಲವೂ ಮಹಾಲಿಂಗದಲ್ಲಿಯೇ ಹುಟ್ಟಿ,
ಮಹಾಲಿಂಗದಲ್ಲಿಯೇ ಲಯವಾಗುವಲ್ಲಿಯೆ
ಪಿಂಡಾಂಡವೆಲ್ಲವೂ ಲಯ. ಸಮಸ್ತ ತತ್ವಂಗಳೆಲ್ಲವೂ ಲಯ.
ಈ ಲಯ ಗಮಂಗಳಿಗೆ ಆಸ್ಪದವಾದ ಶಿವತತ್ವವೊಂದೇ ನಿತ್ಯವಲ್ಲದೆ,
ಉಳಿದವೆಲ್ಲವೊ ನಿತ್ಯವೆಂಬುದು ಹುಸಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Paśu pāśa mala māyākarmaṅgaḷu nityavembe. Nityavādaḍe,
`paśupāśavinirmuktaḥ paramātmā sadāśivaḥ' endudāgi,
'idaṁ malatrayadōṣaṁ guruṇaiva vimōcanaṁ' endudāgi,
paśu pāśa mala māyākarmaṅgaḷu
gurūpadēśadindalū śivaprasādatvadindalū keḍuttirdāvu.
Paśu pāśa mala māyā karmaṅgaḷu
śivayōgigaḷa madhyadalliyū keḍuttirdāvu;
keḍuttirdantha anityavāda vastuva,
abhracchāyava nityavennabahudē?
Nityavembeyādaḍe, malamāyākarmaṅgaḷu
endū tolaguvudilla ennu.
Malamāyākarmaṅgaḷu endū tolaguvudilla embāgavē
muktiyillayennu. Muktiyuṇṭādaḍe,
malamāyākarmaṅgaḷu nityavembudu abad'dha.
Avu nityavādāgave, utpatti sthiti praḷayaṅgaḷillāyennu.
Utpatti sthiti praḷayaṅgaḷuṇṭādalli, nityavenalilla.
Pr̥thviya laya appuvinalli, appuvina laya agniyalli,
agniya laya vāyuvinalli, vāyuvina laya ākāśadalli,
Ākāśada laya ātmanalli, ātmana laya mahāliṅgadalli.
Intivellavū mahāliṅgadalliyē huṭṭi,
mahāliṅgadalliyē layavāguvalliye
piṇḍāṇḍavellavū laya. Samasta tatvaṅgaḷellavū laya.
Ī laya gamaṅgaḷige āspadavāda śivatatvavondē nityavallade,
uḷidavellavo nityavembudu husi kāṇā,
mahāliṅgaguru śivasid'dhēśvara prabhuvē.
ಸ್ಥಲ -
ಪಂಚಮೂರ್ತಿ ಲಿಂಗಸ್ಥಲ