ಅಂಗ ಹಲವರ ಮೇಲೆ ನಿಂದಾತನ
ಕಾಣುವ ಕಂಗಳು ಒಂದೇ ನೋಡಾ.
ಆ ಕಾಣುವ ಕಂಗಳು ತನ್ನ ಕಣ್ಣೋ,
ಬೇರೊಂದು ಬಿನ್ನಾಣದ ಕಣ್ಣೋ ಎಂಬ ಬೆಡಗನರಿದು,
ತನ್ನ ಕಣ್ಣ ಕಳದು ಬಿನ್ನಾಣದ ಕಣ್ಣನಳಿಯಲು
ತನ್ನ ಮುನ್ನಿನ ಕಣ್ಣು ಕಾಣಬಂದಿತ್ತು ನೋಡಾ.
ಅದು ನಿನ್ನ ಕಣ್ಣೆಂದರಿದ ಮಾತ್ರದಲ್ಲಿ ಎನ್ನ ನುಂಗಿತ್ತು.
ನಿನ್ನಲ್ಲಿ ಅಡಗತ್ತು; ಅದು ಅಡಗಿದ ಠಾವಿನಲ್ಲಿ
ನಾನಡಗಿ ನಿರ್ವಯಲಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.