Index   ವಚನ - 112    Search  
 
ತುರಿಯಮೇಲೆ ಉಗುರನಿಕ್ಕಿದರೆ, ಹಿತವಾಗಿಹುದು; ಒತ್ತಿ ತುರಿಸಿದಡೆ ಒಡಲೆಲ್ಲಾ ಉರಿದ ದೃಷ್ಟಾಂತರದಂತೆ, ವಿಷಯ ತೋರಿದಡೆ ಯೋನಿ ಚಕ್ರವ ನಿಶ್ಚಯಿಸುವುದು ಆ ವಿಷಯ ತೀರಿದ ಬಳಿಕ ಆ ಯೋನಿ ಸ್ನಾನದ ಕುಳಿಯಿಂದ ಕಡೆಯಾಗಿಪ್ಪುದು ನೋಡಾ. ಸತಿಯೆಂಬುವಳು ಸತ್ತ ಶವಕಿಂದ ಕಡೆಯಾಗಿಪ್ಪಳು ನೋಡಾ. ಅಪ್ಪಬಾರದು ಅಪ್ಪಬಾರದು; ಅತಿ ಹೇಸಿಕೆ. ಪಶುಪತಿ ನೀ ಮಾಡಿದ ವಿಷಯ ವಿಧಿ ಈರೇಳು ಲೋಕವನಂಡೆಲೆವುತ್ತಿದೆ ನೋಡಾ. ಈ ಸಂಸಾರ ಪ್ರಪಂಚ ದೇವದಾನವ ಮಾನವರು ಪರಿಹರಿಸಲಾರದೆ ಆಳುತ್ತ ಮುಳುಗತ್ತಲಿಪ್ಪರು ನೋಡಾ. ಇದು ಕಾರಣ, ಸದಾಶಿವನನರಿದು ನೆನೆಯಲು ಸಂಸಾರ ಪ್ರಪಂಚು ಕೆಡುವುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.