ಇಂತು ಅಂತರಂಗದಲ್ಲಿ ಲಿಂಗಧಾರಣವಾಯಿತ್ತೆಂದಡೆ,
ಬಹಿರಂಗದಲ್ಲಿ ಅಂಗದ ಮೇಲೆ
ಇಷ್ಟಲಿಂಗಧಾರಣವಿಲ್ಲದೆ ಇರಬಹುದೆ? ಇರಬಾರದು
ಅದು ವೀರಮಾಹೇಶ್ವರರ ಆಚರಣೆಯಲ್ಲದ ಕಾರಣ.
ಎಷ್ಟು ಅರುಹಾದರೂ ಅಂಗದಮೇಲೆ
ಶಿವಲಿಂಗ ಧಾರಣವಿಲ್ಲದಿರ್ದಡದು ಅರುಹಲ್ಲ;
ಅದು ನಮ್ಮ ಪುರಾತನರ ಮತವಲ್ಲ.
ಸಾಕ್ಷಾತ್ ಪರಮೇಶ್ವರನಾದರೂ ಆಗಲಿ,
ಅಂಗದ ಮೇಲೆ ಲಿಂಗಧಾರಣವಿಲ್ಲದಿದ್ದರೆ,
ಅವನ ಮುಖವ ನೋಡಲಾಗದು ಕಾಣಾ.
ಅದೇನು ಕಾರಣವೆಂದರೆ:
ಅದು ಶಿವಾಚಾರದ ಪಥವಲ್ಲದ ಕಾರಣ.
ಗುರುಕರುಣದಿಂದ ಪಡೆದ ಲಿಂಗವ
ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖ ಸೆಜ್ಜೆ ಅಮಳೋಕ್ಯ
ಮೊದಲಾದ ಸ್ಥಾನಂಗಳಲ್ಲಿ ಧರಿಸುವುದೇ ಸತ್ಪಥ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.