Index   ವಚನ - 208    Search  
 
ಎನ್ನ ರೇಚಕ ಪೂರಕ ಕುಂಭಕಗಳೆಲ್ಲವು ಶಿವಮಂತ್ರಮಯವಾಗಿ ಸಂಚರಿಸುತಿಪ್ಪವು. ಎನ್ನ ಪೂರಕವೇ `ಓಂ' ಯೆಂಬ ಪ್ರಣವ ಸ್ವರೂಪವಾಗಿಪ್ಪುದು ನೋಡಾ. ಎನ್ನ ರೇಚಕವೇ `ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ' ಯೆನುತಿಪ್ಪುದು ನೋಡಾ. ಎನ್ನ ಕುಂಭಕವೇ ಪರಶಕ್ತಿಯಮಯವಾಗಿ ಪರಂಜ್ಯೋತಿಸ್ವರೂಪವಾಗಿ ಪರಮಚಿದ್ಭಾಂಡಸ್ಥಾನವಾಗಿಪ್ಪುದು ನೋಡಾ. ``ಮಂತ್ರಮಧ್ಯೇ ಭವೇಲ್ಲಿಂಗಂ| ಲಿಂಗಮಧ್ಯೇ ಭವೇನ್ಮಂತ್ರಃ 'ಮಂತ್ರಲಿಂಗದ್ವಯೋರೈಕ್ಯಂ| ಇಷ್ಟಲಿಂಗಂ ತು ಶಾಂಕರಿ||' ಎಂದುದಾಗಿ, ಎನ್ನ ರೇಚಕ ಪೂರಕ ಕುಂಭಕ ಸ್ವರೂಪವಪ್ಪ ಶಿವಮಂತ್ರವೇ ಶಿವಲಿಂಗಸ್ವರೂಪವಾಗಿ ಎನ್ನ ಕರಸ್ಥಲದಲ್ಲಿ ಕರತಳಮಳಕವಾಗಿ ಕಾಣಲ್ಪಟ್ಟಿತ್ತು ನೋಡಾ. ಆ ಕರಸ್ಥಲದಲ್ಲಿ ಲಿಂಗವ ಕಂಗಳು ತುಂಬಿ ನೋಡಿ ಮನಮುಟ್ಟಿ ನೆನೆದು ಸಂದಿಲ್ಲದಿಷ್ಟಲಿಂಗದಲ್ಲಿ ಭಾವವ ಬಲಿದು ಲಿಂಗವನಪ್ಪಿ ಅಗಲದೆ ಆ ಲಿಂಗದಲ್ಲಿ ಸದಾ ಸನ್ನಿಹಿತನಾಗಿರ್ದು ಶಿವಶಿವಾ ಹರಹರಾಯೆನುತಿರ್ದೆನಯ್ಯ. ನಿಮ್ಮ ನೆನಹಿನಿಂದ ನಿಮ್ಮುವನೆ ನೆನವುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.