Index   ವಚನ - 229    Search  
 
ಕಾಯಕ್ಕೆ ಇಷ್ಟಲಿಂಗವೆಂದೆಂಬಿರಿ; ಮನಕ್ಕೆ ಪ್ರಾಣಲಿಂಗವೆಂದೆಂಬಿರಿ; ಆತ್ಮಂಗೆ ತೃಪ್ತಿಲಿಂಗವೆಂದೆಂಬಿರಿ; ಈ ತ್ರಿವಿಧಾಂಗದಲ್ಲಿ ತ್ರಿವಿಧಲಿಂಗಸಂಬಂಧವಾಯಿತ್ತೆಂದೆಂಬಿರಿ. ಮನ ಭಾವಂಗಳಲ್ಲಿ ಅರ್ಪಿತಕ್ರೀಯಲ್ಲಿ ಆರ್ಪಿತವಿಲ್ಲಾ ಎಂಬುದು ಅದು ಅರುಹೆ? ಕ್ರಿಯೆಗೂ ಜ್ಞಾನಕ್ಕೂ ಭಿನ್ನವುಂಟೇ ಕುರಿಮಾನವ? ಇದು ಕಾರಣ, ಕಾಯದ ಕೈಮುಟ್ಟಿ ಕ್ರಿಯಾರ್ಪಣ. ಮನದ ಕೈಮುಟ್ಟಿ ಜ್ಞಾನಾರ್ಪಣ. ಭಾವದ ಕೈಮುಟ್ಟಿ ಪರಿಣಾಮಾರ್ಪಣ. ಈ ತ್ರಿವಿಧಾರ್ಪಣದೊಳಗೆ ಒಂದ ಬಿಟ್ಟು ಒಂದ ಅರ್ಪಿಸಲಾಗದು. ಇದು ಕಾರಣ, ಎಷ್ಟು ಅರುಹುಳ್ಳಾತನಾದರೂ ಆಗಲಿ ಇಷ್ಟಲಿಂಗಾರ್ಪಣವಿಲ್ಲದೆ, ಪ್ರಾಣವೇ ಲಿಂಗವಾಯಿತ್ತೆಂದು ಅನ್ನ ಪಾನಂಗಳು ಮುಖ್ಯವಾಗಿ ರೂಪಾಗಿ ಬಂದ ಸಮಸ್ತ ಪದಾರ್ಥಂಗಳನು ತನ್ನ ಇಷ್ಟಲಿಂಗಕ್ಕೆ ಕೊಡದೆ ಬಾಯಿಚ್ಚೆಗೆ ತಿಂಬ ನರಕಜೀವಿಯ ಎನಗೊಮ್ಮೆ ತೋರದಿರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.