ಪರುಷ ಸೋಂಕಲು
ಅವಲೋಕದ ಗುಣ ಕೆಟ್ಟು ಚಿನ್ನವಾಗದಿಹುದೆ?
ಹಲವು ತೃಣಂಗಳೆಲ್ಲವು
ಅಗ್ನಿಯ ಮುಟ್ಟಲು ಭಸ್ಮವಾಗದಿಹವೆ?
ಹಳ್ಳಕೊಳ್ಳದ ನೀರೆಲ್ಲಾ ಬಂದು
ಅಂಬುಧಿಯನೆಯ್ದಿ ಅಂಬುಧಿಯಪ್ಪುದು ತಪ್ಪದು ನೋಡಾ!
ಹಲವು ವರ್ಣದ ಪದಾರ್ಥವನೆಲ್ಲವ ತಂದು
ಶಿವಲಿಂಗಾರ್ಪಣವ ಮಾಡಲು
ಆ ಪದಾರ್ಥದ ಪೂರ್ವಾಶ್ರಯವಳಿದು
ಪ್ರಸಾದವಪ್ಪುದು ತಪ್ಪದು ನೋಡಾ!
ಆ ಪ್ರಸಾದವ ಕೊಂಬ ಪ್ರಸಾದಿ ಪವಿತ್ರಕಾಯನು ನೋಡಾ!
ಆತನು ಶುದ್ಧ ನಿರ್ಮಲನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.