ಅಂಗ ಲಿಂಗ, ಲಿಂಗ ಅಂಗವೆಂದೆಂಬಿರಿ;
ಅಂಗ ಸೂತಕವ ಹೇಳುವಿರಿ.
ಪ್ರಾಣವೆ ಪ್ರಸಾದ, ಪ್ರಸಾದವೆ ಪ್ರಾಣವೆಂದೆಂಬಿರಿ;
ಪ್ರಕೃತಿ ಭಾವವ ಕಲ್ಪಿಸಿಕೊಂಬಿರಿ;
ಇದು ಲಿಂಗಾಂಗ ಪ್ರಾಣಲಿಂಗ ಪ್ರಸಾದಭಾವವೆ? ಅಲ್ಲ ಕಾಣಿರೋ.
ಲಿಂಗಾಂಗ ಪ್ರಾಣಲಿಂಗ ಪ್ರಸಾದಭಾವ ಭರಿತವಾದರೆ,
ಲಿಂಗವ ಮುಟ್ಟಿ ಅರ್ಪಿಸಲ್ಲಮ್ಮೆವೆಂಬುದು ಅಜ್ಞಾನ ನೋಡಾ!
ಈ ಅಜ್ಞಾನಿಗಳ ಅಂಗದಲ್ಲಿ ಲಿಂಗವುಂಟೆ?
ಮನದಲ್ಲಿ ಮಂತ್ರವುಂಟೆ? ಪ್ರಾಣದಲ್ಲಿ ಪ್ರಸಾದವುಂಟೆ?
ಈ ಅಶುದ್ಧ ಜೀವಿಗಳಿಗೆ
ಶುದ್ಧವಹ ಶಿವಪ್ರಸಾದ ಸಂಬಂಧ ಎಂದೂ ಇಲ್ಲ ಕಾಣಾ!
ಲಿಂಗ ಸೋಂಕಿದ ಅಂಗದಲ್ಲಿ ಶುದ್ಧಾಶುದ್ಧ ಉಂಟೇ? ಇಲ್ಲ;
ಈ ಅನಂಗಸಂಗಿಗಳ ಮುಖ ತೋರದಿರಾಯೆನಗೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.