Index   ವಚನ - 316    Search  
 
ಬ್ರಹ್ಮರಂಧ್ರವೆಂ[ಬುದು]ಉತ್ತರೋತ್ತರ ಕೇತಾರವಯ್ಯ. ಭ್ರೂಮಧ್ಯವೆಂಬ ಶ್ರೀಶೈಲ; ಹೃದಯ ಕಮಲಕರ್ಣಿಕಾವಾಸವೆನಿಸುವ ಕಾಶಿ ಕಾಣಿಭೋ. ಬ್ರಹ್ಮರಂಧ್ರದಲ್ಲಿ ಗುರುಸ್ವಾಯತ; ಭ್ರೂಮಧ್ಯದಲ್ಲಿ ಲಿಂಗಸ್ವಾಯತ; ಹೃದಯಕಮಲಕರ್ಣಿಕಾವಾಸದಲ್ಲಿ ಪರಮ ಜಂಗಮಲಿಂಗಸ್ವಾಯತ. ಈ ಲಿಂಗಗಳು ಇದ್ದಲ್ಲಿಯೇ ಸಮಸ್ತ ಲಿಂಗಂಗಳಿರ್ಪವು. ಅಲ್ಲಿಯೇ ಸಮಸ್ತ ತೀರ್ಥಯಾತ್ರೆಗಳಿಪ್ಪವು. ಸಮಸ್ತ ಕ್ಷೇತ್ರಂಗಳು ಅಲ್ಲಿಯೇ ಇಪ್ಪವು. ಗತಿಪಥ ಮುಕ್ತಿಯೂ ಅಲ್ಲಿಯೇ ಇಪ್ಪವು. ಹೀಂಗೆ ತನ್ನ ಒಳಹೊರಗೆ ಭರಿತವಾಗಿಪ್ಪ ಲಿಂಗವ ತಾ ಕುರುಹನರಿಯದೆ, ಅನ್ಯಲಿಂಗದಲ್ಲಿ ವರವ ಹಡದೆನೆಂಬ ಕುನ್ನಿಗಳನೊಲ್ಲ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.