Index   ವಚನ - 333    Search  
 
ಸುಗುಣವೆ ಲಿಂಗಪ್ರಾಣಿಯಯ್ಯ. ದುರ್ಗುಣವೆ ವಾಯುಪ್ರಾಣಿಯಯ್ಯ. ಸುಗುಣ ದುರ್ಗುಣವೆಂಬುಭಯವನತಿಗಳದು, ಸುಖ ದುಃಖಾದಿಗಳ ಸಮಾನಂಗಂಡು, ಶತ್ರು ಮಿತ್ರಾದಿಗಳ ಸಮಾನಂಗಂಡು, ಸ್ತುತಿ ನಿಂದ್ಯಾದಿಗಳ ಸಮಾನಂಗಂಡು, ಹಾಸ್ಯ ವಿಸ್ಮಯ ವಿರಹ ಕರಣ ಹೇಸಿಕೆ ಇಂತೀ ಪ್ರಾಣನ ವಿಷಯಭ್ರಾಂತಿಯನತಿಗಳೆದು, ಪ್ರಾಣನ ಪೂರ್ವಾಶ್ರಯವನಳಿದು, ಲಿಂಗದ ನೆನಹು ಸಂಬಂಧಿಸಿ, ಲಿಂಗವೇ ಪ್ರಾಣವಾಗಿರಬಲ್ಲರೆ ಪ್ರಾಣಲಿಂಗಿಸ್ಥಲವಿದೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.