Index   ವಚನ - 365    Search  
 
ಚಿತ್ತದ ಕಳೆಯಲ್ಲಿ ಸದ್ವಿವೇಕವೆಂಬ ಲಿಂಗಕಳೆ ಉದಯಿಸಿ ಮಹಾಜ್ಞಾನ ಪ್ರಕಾಶವಾಗಿ ಮೆರೆವುತ್ತಿಹ ಚಿಲ್ಲಿಂಗವು ಶರಣನ ದೇಹವೆಂಬ ಭೂಮಿಯ ಮರೆಯಲ್ಲಿ ಅಡಗಿಪ್ಪುದು ನೋಡಾ. ನೆಲನ ಮರೆಯ ನಿಧಾನದಂತೆ, ಷಡಾಧಾರದಲ್ಲಿ ಷಡಾದಿಯಾಗಿ ಷಡಾತ್ಮಕನಾಗಿಪ್ಪುದು ನೋಡಾ. ಪಂಚೇಂದ್ರಿಯ ದ್ವಾರಂಗಳಲ್ಲಿ ಪಂಚವದನನಾಗಿ ಪ್ರಭಾವಿಸುತ್ತಿಪ್ಪುದು ನೋಡಾ. ದಶವಾಯುಗಳ ಕೂಡಿ ದೆಸೆದೆಸೆಗೆ ನಡೆವುತ್ತ ವಿಶ್ವಚೈತನ್ಯನಾಗಿಪ್ಪುದು ನೋಡಾ. ಸರ್ವಾಂಗದಲ್ಲಿಯೂ ತನ್ಮಯವಾಗಿಪ್ಪುದು ನೋಡಾ. ಮನದಲ್ಲಿ ಮತಿಯ ಕಣಜ, ಮಾತಿನಲ್ಲಿ ಜ್ಯೋತಿರ್ಲಿಂಗವಾಗಿ ಎನ್ನ ಬ್ರಹ್ಮರಂಧ್ರದಲ್ಲಿ ತೊಳಗಿ ಬೆಳಗುವ ಪರಂಜ್ಯೋತಿ ನೀನೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.