Index   ವಚನ - 481    Search  
 
ಶರಣನೇ ಲಿಂಗ; ಲಿಂಗವೇ ಶರಣ ಈ ಎರಡಕ್ಕೂ ಭಿನ್ನವಿಲ್ಲವಯ್ಯ. ಲಿಂಗಕ್ಕಿಂತಲೂ ಶರಣನೇ ಅಧಿಕವಯ್ಯ. ನಿಮಗೆ ಪಂಚಮುಖ; ನಿಮ್ಮ ಶರಣಂಗೆ ಸಹಸ್ರ ಮುಖ, ಸಹಸ್ರ ಕಣ್ಣು, ಸಹಸ್ರ ಬಾಹು, ಸಹಸ್ರ ಪಾದ. ಆ ಶರಣನ ಮುಖದಲ್ಲಿ ರುದ್ರ; ಭುಜದಲ್ಲಿ ವಿಷ್ಣು, ಜಂಫೆಯಲ್ಲಿ ಅಜನ ಜನನ. ಇಂದ್ರ ಪಾದದಲ್ಲಿ; ಚಂದ್ರ ಮನಸ್ಸಿನಲ್ಲಿ; ಸೂರ್ಯ ಚಕ್ಷುವಿನಲ್ಲಿ; ಅಗ್ನಿ ವಕ್ತ್ರದಲ್ಲಿ; ಪ್ರಾಣದಲ್ಲಿ ವಾಯು; ನಾಭಿಯಲ್ಲಿ ಗಗನ; ಪಾದತಲದಲ್ಲಿ ಭೂಮಿ; ದಶದಿಕ್ಕು ಶ್ರೋತ್ರದಲ್ಲಿ; ಶಿರದಲುದಯ ತೆತ್ತೀಸಕೋಟಿ ದೇವಾದಿದೇವರ್ಕಳು. ಇಂತು ಕುಕ್ಷಿಯಲ್ಲಿ ಜಗವ ನಿರ್ಮಿಸಿ [ನಿಕ್ಷೇಪಿ]ದನು ಅಕ್ಷಯನು, ಅಗಣಿತನು. ಇಂತಪ್ಪ ಮಹಾ ಮಹೇಶ್ವರನ ನಿಜ ಚಿನ್ಮಯಸ್ವರೂಪವೇ ಪ್ರಭುದೇವರು ನೋಡಾ! ಅಂತಪ್ಪ ಪರಮ ಪ್ರಭುವೇ ಎನಗೆ ಪರಮಾನಂದವಪ್ಪ ಪ್ರಾಣಲಿಂಗವೆಂದು ಆರಾಧಿಸಿ ಬದುಕಿದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.