Index   ವಚನ - 518    Search  
 
ಬ್ರಹ್ಮ ವಿಷ್ಣುಪದವೆಂಬುವು ಒಂದು ತೃಣ ನೋಡಾ, ನಿಮ್ಮ ಮಾಹೇಶ್ವರಂಗೆ. ಇಂದ್ರಾದಿ ದಿಕ್ಪಾಲಕರ ಭೋಗ ಒಂದು ತೃಣ ನೋಡಾ, ನಿಮ್ಮ ಮಾಹೇಶ್ವರಂಗೆ, ತ್ರಿಭುವನಸಂಪದ ಒಂದು ಕಿಂಚಿತ್ತು ನೋಡಾ, ನಿಮ್ಮ ಮಾಹೇಶ್ವರಂಗೆ. ದೀಕ್ಷೆಯೆಂಬುವುದಿಲ್ಲ ನೋಡಾ, ದಿವ್ಯಜ್ಞಾನಿ ತಾನಾಗಿ. ಶಿಕ್ಷೆಯೆಂಬುವುದಿಲ್ಲ ನೋಡಾ, ವಿಷಯಂಗಳು ತನ್ನ ವಶಗತವಾದವಾಗಿ. ಮೋಕ್ಷವೆಂಬುವುದಿಲ್ಲ ನೋಡಾ, ನಿತ್ಯ ಮುಕ್ತ ತಾನಾಗಿ. ಮಾಯಾ ಮೋಹ ರಹಿತ ನಿಮ್ಮ ನೆನಹೆ ಪ್ರಾಣವಾಗಿ ನಾನು ಮಾಹೇಶ್ವರನಾದುದ ಏನ ಹೇಳುವೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.