Index   ವಚನ - 519    Search  
 
ಕಲ್ಲ ಶರೀರವ ಧರಿಸಿ ಶಿಲಾಭೋಗಕ್ಕೆ ಬಂದವರು ಕೆಲಬರು: ಕಾಯಕಂಥೆಯ ತೊಟ್ಟು ಕರ್ಮಭೋಗಕ್ಕೆ ಬಂದವರು ಕೆಲಬರು. ಕಲ್ಲಕಂಥೆಯ ತೊಟ್ಟು ಲಿಂಗವೆನಿಸಿಕೊಂಡು ಕಾಯಕಂಥೆಯ ತೊಟ್ಟು ಜಂಗಮವೆನಿಸಿಕೊಂಡು ಲೋಗರ ಉಪಚಾರಕ್ಕೆ ಬಂದ ಭೋಗರುದ್ರರೆಲ್ಲ ಆಗು ಹೋಗಿಂಗೆ ಗುರಿ ನೋಡಾ. ಅದೇನು ಕಾರಣವೆಂದರೆ: ತಮ್ಮಾದಿಯ ಶಿವತತ್ವವ ಭೇದಿಸಿ ಘನಲಿಂಗಪದಸ್ಥರು ತಾವೆಂದೆರಿಯದೆ, ಶಿವಪದಕ್ಕೆ ಅನ್ಯವಾದ ಗಣೇಶ್ವರಪದವೆಂಬ ಗರ್ವಪರ್ವತವಡರಿ ಕೆಟ್ಟರು ನೋಡಾ, ತಮ್ಮ ನಿಜಪದವನರಿಯದೆ. ಇದು ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೆಂಬ ನಿಜಲಿಂಗಜಂಗಮವೊಂದಾದ ಪದವು [ಈ] ಒಂದರ ಹಾದಿಯದಲ್ಲ ಬಿಡಾ, ಮರುಳೆ.