Index   ವಚನ - 579    Search  
 
ಹಾರುವ ಹಕ್ಕಿಗೆ ಗರಿ ಈರೈದಾದುದ ಕಂಡೆನಯ್ಯ. ಕುಳಿತರೆ ಗೇಣುದ್ಧ, ಎದ್ದರೆ ಮಾರುದ್ದ. ಹಾರುವಲ್ಲಿ ಆರುಗೇಣಾಗಿಪ್ಪುದಯ್ಯ. ಮತ್ತರಿದೆನೆಂದರೆ ಅದೆ ನೋಡಾ. ತನ್ನ ತಿಳಿದರೆ ತಾನು ಅತಿಸೂಕ್ಷ್ಮಂ ನೋಡಾ. ತನ್ನ ಪರಿ ವಿಪರೀತ ವಿಸ್ಮಯವಾಗಿದೆ ನೋಡಾ. ಮೂರಾರು ಬಾಗಿಲಲ್ಲಿ ಹಾರಿ ಹಲುಬುವುದಯ್ಯ. ಸರ್ವಬಾಗಿಲಲ್ಲಿ ಪರ್ಬಿಪಲ್ಲಯಿಸುವುದು. ಈ ಬಾಗಿಲೆಲ್ಲವು ತನ್ನ ಹಾದಿಯೆಂದರಿಯದು ನೋಡಾ. ತನ್ನ ಹಾದಿಯನರಿದು ಚೆನ್ನಾಗಿ ನಡೆದಾಡಬಲ್ಲರೆ ಮೇಲುಗಿರಿ ಪರ್ವತವ ಓರಂತೆಯ್ದಿ ನಿರ್ವಯಲ ಬೆರಸಿತ್ತೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.