ಅಂಗದ ಕೊನೆಯ ಮೊನೆಯಲ್ಲಿ ಸಂಗಿಸುವುದು
ಲಿಂಗ ತಾನೆಯಯ್ಯ.
ಕಂಗಳ ಕೊನೆಯ ಮೊನೆಯಲ್ಲಿ ಕಾಣುವುದು ಲಿಂಗ ತಾನೆಯಯ್ಯ.
ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವುದು ಲಿಂಗ ತಾನೆಯಯ್ಯ.
ಜಿಹ್ವೆಯ ಕೊನೆಯ ಮೊನೆಯಲ್ಲಿ ರುಚಿಸುವುದು ಲಿಂಗ ತಾನೆಯಯ್ಯ.
ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವುದು ಲಿಂಗ ತಾನೆಯಯ್ಯ.
ಶ್ರೋತ್ರದ ಕೊನೆಯ ಮೊನೆಯಲ್ಲಿ ಕೇಳುವುದು ಲಿಂಗ ತಾನೆಯಯ್ಯ.
ಭಾವದ ಕೊನೆಯ ಮೊನೆಯಲ್ಲಿ ತೃಪ್ತಿಯಿಂದ
ಪರಿಣಾಮಿಸುವುದು ಲಿಂಗ ತಾನೆಯಯ್ಯ.
ಇದುಕಾರಣ,
ಲಿಂಗ ಮುಂತಲ್ಲದೆ ಸಂಗವ ಮಾಡೆ.
ಲಿಂಗ ಮುಂತಲ್ಲದೆ ಅನ್ಯವ ನೋಡೆ.
ಲಿಂಗ ಮುಂತಲ್ಲದೆ ಅನ್ಯವ ವಾಸಿಸೆ.
ಲಿಂಗ ಮುಂತಲ್ಲದೆ ಅನ್ಯವ ರುಚಿಸೆ.
ಲಿಂಗ ಮುಂತಲ್ಲದೆ ಅನ್ಯವ ಸೋಂಕೆ.
ಲಿಂಗ ಮುಂತಲ್ಲದೆ ಅನ್ಯವ ಕೇಳೆನು.
ಲಿಂಗ ಮುಂತಲ್ಲದೆ ಅನ್ಯವ ಪರಿಣಾಮಿಸೆನು.
ಹೀಂಗೆಂಬ ನೆನಹು ನಿತ್ಯಾನಿತ್ಯ ವಿವೇಕವ್ರತವಯ್ಯಾ ಎನಗೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!