ಆಚಾರಲಿಂಗ ಗುರುಲಿಂಗ ಶಿವಲಿಂಗ
ಇವು ಮೂರು ಇಷ್ಟಲಿಂಗ.
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ
ಇವು ಮೂರು ಪ್ರಾಣಲಿಂಗ.
ಇಷ್ಟಲಿಂಗವು ಸತ್ಕ್ರಿಯಾ ಸ್ವರೂಪು.
ಪ್ರಾಣಲಿಂಗವು ಸುಜ್ಞಾನ ಸ್ವರೂಪು.
ಮತ್ತೆ ಕ್ರಿಯಾ ಸ್ವರೂಪವೇ ಲಿಂಗವು.
ಸುಜ್ಞಾನ ಸ್ವರೂಪವೇ ಜಂಗಮವು.
ಇದು ಕಾರಣ,
ಆಕಾರ ಸ್ವರೂಪವೇ ಲಿಂಗವು;
ನಿರಾಕಾರ ಸ್ವರೂಪವೇ ಜಂಗಮವು.
ಆದಿಯೆ ಲಿಂಗವು; ಅನಾದಿಯೇ ಜಂಗಮವು.
ಇದು ಕಾರಣ,
ಜಂಗಮ ಪ್ರಸಾದ ಲಿಂಗಕ್ಕಲ್ಲದೆ
ಲಿಂಗ ಪ್ರಸಾದ ಜಂಗಮಕ್ಕೆಂಬುದು ಅದು ಅಜ್ಞಾನ ನೋಡಾ.
ಆದಿಲಿಂಗ ಅನಾದಿಜಂಗಮ ಇವೆರಡು ಒಂದಾಗಿ ನಿಂದ ನಿಲುವು
ನಿರಾಕಾರ ಪರವಸ್ತು.
ಆ ನಿರಾಕಾರ ಪರವಸ್ತುವನೊಡಗೂಡಿ
ನಾನು ನಿರಾಳನಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.