ಆತ್ಮನು ಘಟದಲ್ಲಿಪ್ಪ ಸೂತ್ರವ ಯೋಗಿಗಳು ಭೇದಿಸಿ ಕಂಡು
ಧ್ಯಾನ ಧಾರಣ ಸಮಾಧಿಯಿಂದ ಆತ್ಮನ ಕಟ್ಟುವಡೆದೆನೆಂದು
ನುಡಿದ ದಿಟ್ಟರ ನೋಡಾ.
ಆತ್ಮ ಕಟ್ಟುವಡೆದ ಮತ್ತೆ ನಿಧಾನಿಸುವುದೇನು ಧಾರಣದಲ್ಲಿ?
ಎಡೆ ತಾಕುವದೇನು ಸಮಾಧಿಯಲ್ಲಿ?
ಸಮಾಧಾನದಿಂದ ಸಮಾಧಿಯಲ್ಲಿಪ್ಪುದೇನು ಎಂಬುದ ತಾನರಿತಲ್ಲಿ
ಯೋನಿಯ ಯೋಗವೆನಲೇತಕ್ಕೆ?
ಈಡಾ ಪಿಂಗಳವೆಂಬ ಎರಡು ದಾರಿಯಲ್ಲಿ
ಸುಷುಮ್ನಾನಾಳಕ್ಕೆ ಏರಿದ ಮತ್ತೆ
ಆತ್ಮನು ಮತ್ತೆ ಮತ್ತೆ ನಾಡಿನಾಡಿಗಳಲ್ಲಿ ದ್ವಾರದ್ವಾರಂಗಳಲ್ಲಿ
ಭೇದಿಸಿ ವೇದಿಸಲೇತಕ್ಕೆ?
ಬೀಜದ ತಿರುಳು ಸತ್ತ ಮತ್ತೆ
ಎಯ್ದೆ ನೀರಹೊಯ್ದಡೆ ಸಾಗಿಸಿ ಬೆಳೆದುದುಂಟೆ?
ಆತ್ಮಯೋಗಿಯಾದಲ್ಲಿ ನೇತ್ರ ಶ್ರೋತ್ರ ಘ್ರಾಣ ತ್ವಕ್ಕು ಜಿಹ್ವೆ
ಎಂದಿನ ನಿಹಿತದಂತೆ ಆಡಬಹುದೆ?
ಅದು ಯೋಗವಲ್ಲ, ಇವ ಕಲಿತೆಹೆನೆಂಬ ಬಲು ರೋಗವಲ್ಲದೆ,
ಇದು ಮೀಸಲುಗವಿತೆ, ಇದು ಘಾತಕರುಗಳಿಗೆ ಅಸಾಧ್ಯ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
Art
Manuscript
Music
Courtesy:
Transliteration
Ātmanu ghaṭadallippa sūtrava yōgigaḷu bhēdisi kaṇḍu
dhyāna dhāraṇa samādhiyinda ātmana kaṭṭuvaḍedenendu
nuḍida diṭṭara nōḍā.
Ātma kaṭṭuvaḍeda matte nidhānisuvudēnu dhāraṇadalli?
Eḍe tākuvadēnu samādhiyalli?
Samādhānadinda samādhiyallippudēnu embuda tānaritalli
yōniya yōgavenalētakke?
Īḍā piṅgaḷavemba eraḍu dāriyalli
suṣumnānāḷakke ērida matte
ātmanu matte matte nāḍināḍigaḷalli dvāradvāraṅgaḷalli
Bhēdisi vēdisalētakke?
Bījada tiruḷu satta matte
eyde nīrahoydaḍe sāgisi beḷeduduṇṭe?
Ātmayōgiyādalli nētra śrōtra ghrāṇa tvakku jihve
endina nihitadante āḍabahude?
Adu yōgavalla, iva kalitehenemba balu rōgavallade,
idu mīsalugavite, idu ghātakarugaḷige asādhya.
Śambhuvininditta svayambhuvinindatta atibaḷa nōḍā,
mātuḷaṅga madhukēśvaranu.